ವ್ಯಸನಮುಕ್ತ ಸಮಾಜ ನಿರ್ಮಿಸೋಣ

1
Published on

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ ಹದಿಹರೆಯದ ವಯಸ್ಸಿನಲ್ಲಿ ವ್ಯಸನಕ್ಕೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳಬಾರದು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸೂಲಿಬೆಲೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಿರಣ್ ಹೇಳಿದರು. ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ನೆಹರು ಯುವ ಕೇಂದ್ರ ಹಾಗೂ ನಾಡಪ್ರಭು ಕೆಂಪೇಗೌಡ ಯುವಕರ ಸಂಘ ಸೂಲಿಬೆಲೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಜಾಗೃತಿ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೌಷ್ಟಿಕ ಆಹಾರ ಸೇವೆನೆ ಮಾಡಿಕೊಂಡು, ಯುವ ಸಮಾಜ ದೇಶದ ಶಕ್ತಿಯಾಗಬೇಕು ಎಂದರು. ವಕೀಲ ಬಿ.ಎಂ.ಪ್ರಭಾಕರ್ ಮಾತನಾಡಿ, ವ್ಯಸನಕ್ಕೆ ದಾಸನಾಗಿರುವ ವ್ಯಕ್ತಿಗಳು ಸಮಾಜಕ್ಕೆ ಕಂಟಕರಾಗುತ್ತಾರೆ. ಗಾಂಜಾ, ಅಫೀಮು, ಕೊಕೇನ್‌ನಂತಹ ಮಾದಕವಸ್ತುಗಳ ಸೇವನೆಯಿಂದ ತನ್ನ ಸುತ್ತುಮುತ್ತಲಿನ ಪರಿಸರವನ್ನು ಹಾಳು ಮಾಡುವ ಚಿಂತನೆಗಳು ಸೃಷ್ಟಿಯಾಗುತ್ತವೆ. ಇದು ಸಮಾಜ ಘಾತಕ ಕೆಲಸಗಳಿಗೆ ನಾಂದಿಯಾಗುತ್ತದೆ. ಅಪರಾಧಗಳು ಹೆಚ್ಚಾಗುತ್ತವೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿರುವುದು ವಿಷಾದನೀಯ ಎಂದರು. ಪ್ರಾಚಾರ್ಯ ಡಾ.ಕೆ.ಮೋಹನ್ ಕುಮಾರ್ ಮಾತನಾಡಿ, ನೆಹರು ಯುವಕೇಂದ್ರ ಹಾಗೂ ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ವತಿಯಿಂದ ಕಾಲೇಜು ವಿದ್ಯಾರ್ಥಿಗಳನ್ನು ದೃಷ್ಟಿಯಾಗಿ ಇಟ್ಟುಕೊಂಡು ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಾದರಿ ವಿಚಾರ ಎಂದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಶ್ರೀವಾಣಿಕೋನರೆಡ್ಡಿ ಮಾತನಾಡಿ, ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾದಕವಸ್ತುಗಳನ್ನು ಸರಬರಾಜು ಮಾಡುವ ಜಾಲಗಳು ಹೆಚ್ಚಾಗಿರುತ್ತವೆ. ಇಂತಹ ಜಾಲಗಳಿಗೆ ಯುವಕರು ಬಲಿಯಾಗಬಾರದು. ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ಭಾರತ ಶಕ್ತಿಶಾಲಿ ಯುವ ರಾಷ್ಟ್ರವಾಗಬೇಕು ಎಂದರು. ನೆಹರು ಯುವಕೇಂದ್ರ ಜಿಲ್ಲಾ ಯುವ ಅಧಿಕಾರಿ ಶ್ರೀವಾಣಿ, ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ, ಡಾ.ಕಿರಣ್, ಹೆಲ್ತ್ ಇನ್‌ಸ್ಪೆಕ್ಟರ್ ರಘು, ಪ್ರಾಂಶುಪಾಲ ಡಾ.ಮೋಹನ್ ಕುಮಾರ್, ವಕೀಲ ಬಿ.ಎಂ.ಅನಂತ ಪ್ರಭಾಕರ್, ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ಅಧ್ಯಕ್ಷ ಬಿ.ಎಂ.ಸಾಗರ್, ನಿರ್ದೇಶಕ ರಾಜಶೇಖರ ರೆಡ್ಡಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸೈಯದ್ ಮಹಬೂಬ್, ದೇವಿದಾಸ್ ಸುಬ್ರಾಯ್ ಸೇಠ್, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ, ಜಿಯಾವುಲ್ಲಾ, ಉಪನ್ಯಾಸಕರಾದ ಡಾ.ಅಮೀರ್ ಪಾಷಾ, ಸಂಗೀತಾ, ಶಶಿಕಲಾ, ಕೃಷ್ಣಪ್ಪ ಇದ್ದರು.

ವ್ಯಸನಕ್ಕೆ ದಾಸನಾದ ವ್ಯಕ್ತಿಯಿಂದ ಸಮಾಜ ಹಾಳು ಮಾಡುವ ಕೆಲಸಗಳು ಹೆಚ್ಚಾಗುತ್ತವೆ. ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ ವ್ಯಸನ ದಾಸರಾದವರಿಗೆ ಉಚಿತ ಕೌನ್ಸಿಲಿಂಗ್ ಮಾಡಿಸಿ, ಆರೋಗ್ಯ ತಪಾಸಣೆಗೆ ಅನುಕೂಲ ಮಾಡಿಕೊಡುತ್ತೇವೆ. ರಘು ಜೂನಿಯರ್ ಹೆಲ್ತ್ ಇನ್‌ಸ್ಪೆಕ್ಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net