

ವಿಜಯವಾಣಿ ಸುದ್ದಿಜಾಲ ಧಾರವಾಡ
ಚಟಗಳಿಗೆ, ವ್ಯಸನಗಳಿಗೆ ದಾಸರಾದವರನ್ನು ಪರಿವರ್ತನೆ ಮಾಡುವುದರ ಜತೆಗೆ ಮಕ್ಕಳು, ವಿದ್ಯಾರ್ಥಿಗಳು, ಯುವ ಜನಾಂಗವು ಚಟಗಳಿಗೆ ಬಲಿಯಾಗದಂತೆ ಎಚ್ಚರ ಮೂಡಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ ಎಂದು ಪ್ರೊ. ಆಧ್ಯಾತ್ಮಿಕ ಚಿಂತಕ ಸಿದ್ದಣ್ಣ ಲಂಗೋಟಿ ಹೇಳಿದರು.
ಇಲ್ಲಿನ ಗಾಂಧಿನಗರದ ವಿಜಯ ಮಹಾಂತೇಶ ಭವನದಲ್ಲಿ ಗುರುಬಸವ ಮಹಾಂತ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಲಕಲ್ಲಿನ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಲಿಂ.ಡಾ. ಮಹಾಂತ ಶಿವಯೋಗಿಗಳ ಜನ್ಮದಿನವನ್ನು ಸರ್ಕಾರವು ವ್ಯಸನಮುಕ್ತ ದಿನ ಕಾರ್ಯಕ್ರಮವಾಗಿ ಆಯೋಜಿಸಿದೆ. ಜಾತಿ, ಮತ, ಪಂಥ, ಧರ್ಮ, ಭಾಷೆ ಎನ್ನದೆ ಅಖಂಡ 52 ವರ್ಷದ ಕಾಲ ಮಹಾಂತ ಅಪ್ಪಗಳು ಜೋಳಿಗೆ ಹಿಡಿದು ಚಟಗಳ, ವ್ಯಸನಗಳ ಭಿಕ್ಷೆ ಬೇಡುತ್ತಾ ಲಕ್ಷಾಂತರ ಕುಟುಂಬಗಳ ಉದ್ಧಾರ ಮಾಡಿದ್ದಾರೆ. ಶಾಲೆ, ಕಾಲೇಜು, ಸಂಘ ಸಂಸ್ಥೆಗಳಲ್ಲಿ ವ್ಯಸನಮುಕ್ತ ಕಾರ್ಯಕ್ರಮ ಆಯೋಜಿಸಿ ವೈದ್ಯರು, ಸಾಹಿತಿಗಳು, ಧರ್ಮ ಗುರುಗಳನ್ನು ನೀತಿವಂತರನ್ನು ಆಹ್ವಾನಿಸಿ ಉಪನ್ಯಾಸ ಮಾಡಿಸಿ ವ್ಯಸನಮುಕ್ತ ಸಮಾಜಕ್ಕೆ ನಿರಂತರವಾಗಿ ಶ್ರಮಿಸಿದ್ದಾರೆ ಎಂದರು.
ಗುರುಬಸವ ಮಹಾಂತ ಟ್ರಸ್ಟ್ ಅಧ್ಯಕ್ಷ ರಮೇಶ ತುಂಬರಗುದ್ದಿ ಮಾತನಾಡಿ, ಮಹಾಂತ ಅಪ್ಪಗಳು ಆಳವಾದ ಅಧ್ಯಯನ, ಚಿಂತನೆ ಜತೆಗೆ ಲೌಕಿಕ ಬದುಕಿನ ಅನುಭವಗಳನ್ನು ಕೇಳಿ ತಿಳಿದುಕೊಂಡಿದ್ದರು. ಅಂತೆಯೇ ವ್ಯಸನಿ, ದುರಾಚಾರಿಗಳಿಗೆ ಬಸವಾದಿ ಶರಣರ ವಚನಾನುಭವ ಹಾಗೂ ಸ್ವಾನುಭವ ನೆಲೆಯಲ್ಲಿ ಪರಿಹಾರ ಸೂಚಿಸುತ್ತಿದ್ದರು ಎಂದರು.
ಡಾ. ಕಲ್ಯಾಣಮ್ಮ, ಗಂಗಮ್ಮ ಬೆಳಗಾವಿ, ಶಿವಪುತ್ರಪ್ಪ ಬಿರಾದಾರ, ಶಿವಾನಂದ ಲೋಲೆನವರ, ರಾಜೇಶ್ವರಿ ತುಂಬರಗುದ್ದಿ, ಇತರರು ಇದ್ದರು. ಗುರುದೇವಿ ಸ್ವಾಗತಿಸಿದರು. ಗುರುಬಸವ ನಿರೂಪಿಸಿದರು. ಚೈತ್ರಾ ವಂದಿಸಿದರು.