ವ್ಯಸನಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ

9 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾದಕ ವಸ್ತುಗಳ ಸೇವನೆ ಹಾಗೂ ದುಶ್ಚಟಗಳಿಂದ ಯುವ ಸಮುದಾಯ ಗಂಭೀರವಾದ ದೈಹಿಕ, ಮಾನಸಿಕ ಸಮಸ್ಯೆಗಳೊಂದಿಗೆ ಆರ್ಥಿಕ ಸಂಕಷ್ಟ ಅನುಭವಿಸುತ್ತಾರೆ. ಇವರಲ್ಲಿ ಜಾಗೃತಿ ಮೂಡಿಸಿ ಸದೃಢ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಹೇಳಿದರು.
ನಗರದ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಕಾಲೇಜಿನ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮತೋಲನ ಆಹಾರ ಸೇವನೆ, ವ್ಯಾಯಾಮ ಇತರ ಆರೋಗ್ಯಕರ ಹವ್ಯಾಸ ರೂಪಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಲು ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಮಾದಕ ವ್ಯಸನ ಮೆದುಳಿನ ಕಾಯಿಲೆಯಾಗಿದೆ. ಮಾದಕ ವ್ಯಸನಗಳನ್ನು ಲಘುವಾಗಿ ಪರಿಗಣಿಸದೆ ಅವುಗಳ ವಿರುದ್ಧ ಹೋರಾಡುವುದು ಅವಶ್ಯವಾಗಿದೆ. ಪ್ರತಿ ವರ್ಷ ಆ. 1ರಂದು ಡಾ. ಮಹಾಂತ ಶಿವಯೋಗಿಗಳ ಜನ್ಮದಿನ ನಿಮಿತ್ತ ವ್ಯಸನ ಮುಕ್ತ ದಿನವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಬಿ. ಕರಡೋಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಇಲಾಖೆ ಮನೋವೈದ್ಯೆ ಡಾ. ವೈಶಾಲಿ ಹೆಗಡೆ ವಿಶೇಷ ಉಪನ್ಯಾಸ ನೀಡಿದರು. ಕವಿವಿ ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ, ಕೆಸಿಡಿ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಎಚ್.ಕೆ. ಕೋಳೂರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.
ಬಿ.ಆರ್.ಪಾತ್ರೋಟ ಸ್ವಾಗತಿಸಿದರು. ಡಾ.ಸುರೇಶ ಉಲ್ಲಣ್ಣನವರ ನಿರೂಪಿಸಿದರು. ಕೆ.ಕೆ. ಚವ್ಹಾಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net