

ಬಾಗಲಕೋಟೆ: ವ್ಯಸನಿಗಳು ಕುಡುಕರಷ್ಟೇ ಅಲ್ಲ, ಅದರ ಜೊತೆ ಡ್ರಗ್ಸ್, ಗಾಂಜಾ, ಅಫೀಮು ಮುಂತಾದ ಮಾದಕ ವಸ್ತುಗಳ ಬಳಕೆ ಇಂದು ಯುವಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇದರ ನಿರ್ಮೂಲನೆಗೆ ಜಾಗೃತಿ ಅಗತ್ಯವಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ, ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಲಿಂಗೈಕ್ಯ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಪರವಾನಿಗೆ ಪಡೆದ ಸಾರಾಯಿ ಅಂಗಡಿಗಳಲ್ಲಿ ಮಧ್ಯ ದೊರೆಯುತ್ತಿದೆ. ಆದರೆ ಔಷಧಿ ಅಂಗಡಿಗಳಲ್ಲಿಯು ಕೂಡಾ ಅಮಲು ಬರುವ ಔಷಧಿಗಳು ಮಾರಾಟವಾಗುತ್ತಿವೆ. ಮಕ್ಕಳು ತಿನ್ನುವಂತಹ ಚಾಕಲೇಟ್‍ನಲ್ಲೂ ಕೂಡಾ ಮಾದಕ ವಸ್ತುಗಳನ್ನು ಇರುವುದು ಕಂಡುಬರುತ್ತಿದ್ದು, ಇಂದು ಪಾಲಕರು ಮಕ್ಕಳಿಗೆ ಚಾಕಲೇಟ್ ಕೊಡಿಸಬೇಕಾದರೂ ಕೂಡಾ ತಾವು ಪರೀಕ್ಷಿಸಿ ಕೊಡುವ ಪರಿಸ್ಥಿತಿ ಒದಗಿ ಬಂದಿದೆ. ವ್ಯಸನ ಆರೋಗ್ಯವನ್ನು ಹಾಳು ಮಾಡುವದಲ್ಲದೇ ಮನೆಯಲ್ಲಿರುವ ಸರ್ವ ಸದಸ್ಯರ ನೆಮ್ಮದಿಯನ್ನು ಹಾಳು ಮಾಡುತ್ತದೆ. ಇಂತಹ ವ್ಯಸನದಿಂದ ಅನೇಕ ಕುಟುಂಬಗಳು ಅವನತಿಗೊಂಡಿವೆ ಎಂದರು.
ಕುಡಿತದಿಂದ ಯುವಕರು ಹಾಳಾಗುತ್ತಿರುವದನ್ನು ಕಂಡು ಅಬಕಾರಿ ಇಲಾಖೆಯನ್ನು ಸುಧಾರಣೆ ತರುವುದು ಮುಖ್ಯಮಂತ್ರಿಗಳ ಗಮನದಲ್ಲಿದೆ. ಇದರ ಬಗ್ಗೆ ಚಿಂತನೆ ಸಹ ಮಾಡುತ್ತಿದ್ದಾರೆ. ದಾರಿ ತಪ್ಪುತ್ತಿರುವ ಕುಟುಂಬಗಳ ಗೌರವ ಉಳಿಸುವ ಕೆಲಸವನ್ನು ಸಮಾಜ ಮಾಡಬೇಕು. ಇದು ಎಲ್ಲರ ಜವಾಬ್ದಾರಿಯಾಗಿದೆ. ಮುಖ್ಯವಾಗಿ ಶಾಲಾ-ಕಾಲೇಜುಗಳ ಮಕ್ಕಳಲ್ಲಿ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಬೇಕು. ಈ ಕಾರ್ಯ ಪ್ರತಿ ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಜಾಗೃತಿ ಮೂಡಿಸಲು ತಿಳಿಸಿದರು. ಮನೋವೈದ್ಯರ ತಂಡ ಗ್ರಾಮಗಳಲ್ಲಿ ತೆರಳಿ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ ಡಾ.ಮಹಾಂತ ಶ್ರೀಗಳ ಕಾರ್ಯ ಶ್ಲಾಘನೀಯವಾಗಿದ್ದು, 12ನೇ ಶತಮಾನದ ಬಸವಣ್ಣವರ ಕಾಲದ ಕಾರ್ಯಗಳನ್ನು ಸ್ವತಃ ಮೈಗೂಡಿಸಿಕೊಂಡಿದ್ದರು. ಅವರ ದೃಷ್ಠಿಯಲ್ಲಿ ಮದುವೆಯಲ್ಲಿ ಅಕ್ಷತೆಯನ್ನು ಹಾಕಬಾರದು. ಅಕ್ಷತೆ ಪ್ರತಿಯೊಂದು ಅಕ್ಕಿಯ ಕಾಳುಗಳಿಂದ ಕೂಡಿದ್ದು, ಹಾಕಿದ ಅಕ್ಕಿ ಕಾಳು ಜನ ತುಳಿದಾಡುವದನ್ನು ಕಂಡು ಅಕ್ಕಿಯ ಬದಲಿಗೆ ಪುಷ್ಪ ಹಾಕಲು ತಿಳಿಸಿದ್ದರು. ತಮ್ಮ ಮಹಾಂತ ಜೋಳಿಗೆ ಮೂಲಕ ವ್ಯಸಗಳನ್ನು ತಮ್ಮ ಜೋಳಿಗೆ ಹಾಕಿಸಿಕೊಳ್ಳುವ ಮೂಲಕ ಅನೇಕ ಜನರನ್ನು ವ್ಯಸನಮುಕ್ತರನ್ನಾಗಿ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವಾಯ್.ಮೇಟಿ ಮಾತನಾಡಿ ಕುಡಿತದಿಂದ ಆರೋಗ್ಯ ಹಾಳಾಗುವದರ ಜೊತೆಗೆ ಮಾನಸಿ ನೆಮ್ಮದಿ ಕೂಡಾ ಹಾಳಾಗುತ್ತದೆ. ಈ ಬಗ್ಗೆ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವುದು ಹೆಚ್ಚಾಗಬೇಕು. ಅಂದಾಗ ಮಾತ್ರ ವ್ಯಸನಮುಕ್ತ ನಿರ್ಮೂಲನೆ ಸಾಧ್ಯವೆಂದರು. ಈ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಅಲ್ಲದೇ ವ್ಯಸನಮುಕ್ತ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸಾನಿಧ್ಯ ವಹಿಸಿದ್ದ ಇಲಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಆಶೀರ್ವಚನ ನೀಡಿದರು. ಶಿರೂರ ವಿಜಯ ಮಹಾಂತೇಶ್ವರ ತೀರ್ಥ ಶಾಖಾಮಠದ ಡಾ.ಬಸವಲಿಂಗ ಶ್ರೀಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶೀಧರ ಕುರೇರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಿ.ಎಸ್.ಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.