

ಹಾಸನ: ಗ್ರಾಹಕರು ವ್ಯವಹಾರಿಕವಾಗಿ ಯಾವುದೇ ಮೋಸ, ವಂಚನೆಗೆ ಒಳಗಾದರೆ ಕಾನೂನಿನ ಅಡಿಯಲ್ಲಿ ಪರಿಹಾರ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಕೆ ರವಿಕಾಂತ್ ಅವರು ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ನಾಗರಿಕ ಸರಬರಾಜು ಇಲಾಖೆ, ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ ಮತ್ತು ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ವತಿಯಿಂದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರೊಂದಿಗೆ ವ್ಯವಹರಿಸುವಾಗ ಅವರನ್ನು ಗೌರವಯುತವಾಗಿ ಕಾಣಬೇಕು. ಗ್ರಾಹಕರು ಖರೀದಿಸಿದ ಸಾಮಗ್ರಿಗಳಿಗೆ ರಶೀದಿ ಕೇಳಿ ಪಡೆದುಕೊಳ್ಳಬೇಕು. ಆಗ ಅನ್ಯಾಯ ಅಥವಾ ಸೇವಾ ನ್ಯೂನತೆ ಕಂಡು ಬಂದರೆ ನ್ಯಾಯಾಲಯದ ಮೊರೆ ಹೋಗಿ ಪರಿಹಾರ ಪಡೆದುಕೊಳ್ಳಬಹುದು. ಗ್ರಾಹಕರ ದೂರು ನೀಡುವ ವಿಧಾನಕ್ಕೆ ಸಂಬಂಧಿಸಿದ ಗೊಂದಲಗಳಿದ್ದರೆ ಗ್ರಾಹಕರ ಮಾಹಿತಿ ವೇದಿಕೆಗೆ ಭೇಟಿ ನೀಡಿ ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಕಾರ್ಯಾಧ್ಯಕ್ಷ ವೈ.ಎಸ್. ಸಿದ್ದಯ್ಯ ಅವರು ಮಾತನಾಡಿ, ನಾವು ನವೀಕರಿಸಬಹುದಾದ ಇಂಧನ ತಯಾರಿಸಬೇಕು. ತ್ಯಾಜ್ಯವು ಹೆಚ್ಚಾದಂತೆ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ವ್ಯವಸ್ಥಿತವಾಗಿ ಶೇಖರಣೆ ಮಾಡಿ ವೈಜ್ಞಾನಿಕವಾಗಿ ನಾಶ ಮಾಡಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಸಿ.ಎಂ.ಚಂಚಲಾ ಅವರು ಮಾತನಾಡಿ, ಯಾವುದೇ ವಸ್ತುವನ್ನು ಕೊಂಡುಕೊಂಡರೆ ಅದರ ಮೌಲ್ಯವನ್ನು ಗ್ರಾಹಕರು ತಿಳಿದುಕೊಳ್ಳಬೇಕು. ಅಂಚೆ ಕಚೇರಿ, ಬ್ಯಾಂಕಿಂಗ್, ವೈದ್ಯಕೀಯ ಸೇವೆಗಳು ಸೇರಿದಂತೆ ಹಲವಾರು ಸೇವೆಗಳನ್ನು ಪಡೆಯುವಲ್ಲಿ ಅನ್ಯಾಯವಾದರೆ ನೀವು ಕಾನೂನಿನಡಿ ನ್ಯಾಯವನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣೇಗೌಡ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಆರ್. ಅನುಪಮಾ ಮತ್ತಿತರರು ಹಾಜರಿದ್ದರು.