ವ್ಯವಸ್ಥಿತವಾಗಿ ಸಾಗರ-ಸೊರಬ ರಸ್ತೆ ಅಗಲೀಕರಣ; ಅವಧಿಗಿಂತ ಮೊದಲೇ ಸಂಚಾರಕ್ಕೆ ಮುಕ್ತ: ಹರತಾಳು ಹಾಲಪ್ಪ

SGR WEBBBB
Published on

ಸಾಗರ: ಇಲ್ಲಿನ ಸೊರಬ ರಸ್ತೆಯ ಒಂದು ಭಾಗದ ಅಗಲೀಕರಣ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಅವಧಿಗಿಂತ ಮುನ್ನ ಜನರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ರಸ್ತೆ ಅಗಲೀಕರಣ ಕಾಮಗಾರಿಯನ್ನು ಮಂಗಳವಾರ ವೀಕ್ಷಣೆ ಮಾಡಿ ಮಾತನಾಡಿದ ಅವರು, ಈಗಾಗಲೇ ಡಿವೈಡರ್ ಅಳವಡಿಸಿ ದೀಪಗಳನ್ನು ಹಾಕಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಡಾಂಬರೀಕರಣ ಮಾಡಲಾಗುತ್ತದೆ. ಸಾಗರ ಪ್ರವೇಶ ಮಾಡುವ ನಾಲ್ಕೂ ಭಾಗಗಳಲ್ಲಿ 10 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಿ, ಡಿವೈಡರ್ ನಿರ್ಮಿಸಿ ಅಲಂಕಾರಿಕ ದೀಪ ಅಳವಡಿಸಲಾಗುವುದು ಎಂದರು.

ಬಿ.ಎಚ್.ರಸ್ತೆ 8 ಕಿ.ಮೀ. ಅಗಲೀಕರಣ ಕಾರ್ಯ ಆರಂಭಗೊಂಡಿದೆ. ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ತಿಲಕ್ ರಸ್ತೆ ಮತ್ತು ಜೆ.ಸಿ.ರಸ್ತೆಯಲ್ಲಿ ಚರಂಡಿ ಮೇಲ್ಭಾಗಕ್ಕೆ ಸ್ಲಾೃಬ್ ಹಾಕಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಬೇಕಾದ ಎಲ್ಲ ಕ್ರಮಕೈಗೊಳ್ಳಲಾಗುತ್ತದೆ. ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ಸರ್ಕಾರದ ಜತೆಗೆ ಸಂಸದರು ಸಹ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಜನತೆಯ ಬಹು ವರ್ಷಗಳ ಬೇಡಿಕೆ ಈಡೇರಿಸಿದಂತಾಗುತ್ತಿದೆ. ರಸ್ತೆ ಅಗಲೀಕರಣದಿಂದ ಸಂಚಾರಕ್ಕೂ ಅನುಕೂಲವಾಗುತ್ತದೆ, ವ್ಯಾಪಾರವೂ ಹೆಚ್ಚಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net