ವ್ಯವಸಾಯದಲ್ಲಿ ಆಧುನಿಕ ಪದ್ಧತಿ ಅಳವಡಿಸಿ

13ydg01
Published on

ಯಾದಗಿರಿ: ಸಾಮಾಜಿಕ ಭದ್ರತಾ ಯೋಜನೆಗಳು ಗ್ರಾಮೀಣ ಪ್ರದೇಶಗಳಲ್ಲಿನ ಜನರ ಮನೆ ಬಾಗಿಲಿಗೆ ತಲುಪಿದಾಗ ಮಾತ್ರ ಸರಕಾರದ ಉದ್ದೇಶ ಸಫಲವಾಗುತ್ತದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಲೋಕೇಶ ತಿಳಿಸಿದರು.

ಶುಕ್ರವಾರ ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಕೃಷ್ಣಾ ಗ್ರಾಮೀಣ ಬ್ಯಾಂಕ್ನಿಂದ ಆಯೋಜಿಸಿದ್ದ ವಿಶೇಷ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ವ್ಯವಸಾಯದಲ್ಲಿ ಅಧುನಿಕ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಗ್ರಾಮೀಣ ಬ್ಯಾಂಕುಗಳು ರೈತರಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸದಾ ಮುಂದಿವೆ ಎಂದರು.

ಸರಕಾರಿ ಯೋಜನೆಗಳ ಮಾಹಿತಿಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿನ ಯುವಕರು ಹಿರಿಯರಿಗೆ ಯೋಜನೆಗಳ ಲಾಭ ಹೇಗೆ ಪಡೆದುಕೊಳ್ಳಬೇಕು ಎಂದು ತಿಳಿವಳಿಕೆ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.

ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ಜಿ.ಎಸ್.ಕೊಡ್ಲಿ ಮಾತನಾಡಿ, ರೈತರು ಬ್ಯಾಂಕಿನಿಂದ ಪಡೆದ ಬೆಳೆ, ಕೃಷಿ ಹಾಗೂ ವಾಣಿಜ್ಯ ಸಾಲವನ್ನು ಸಕಾಲಕ್ಕೆ ಪಾವತಿಸಿದರೆ ಇನ್ನೂ ಹೆಚ್ಚಿನ ಸೌಲಭ್ಯ ಪಡೆದುಕೋಳ್ಳಲು ಅನುಕೂಲವಾಗಲಿದೆ. ಅಲ್ಲದೆ, ನಿಮಗೆ ಕಡಿಮೆ ಬಡ್ಡಿದರ ಕೂಡ ಸಿಗುತ್ತದೆ. ಇದರ ಲಾಭ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net