ವ್ಯವಸಾಯ ದೇಶ ಸೇವೆಯೂ ಹೌದು

CTD TOTAGARIKE
Published on

ಚಿತ್ರದುರ್ಗ: ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಗಳಿಸಲು ಪರಿಶ್ರಮದ ಅಗತ್ಯವಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ತೋಟಗಾರಿಕೆ ಪಿತಾಮಹಾ ದಿ.ಡಾ.ಎಂ.ಎಚ್.ಮರಿಗೌಡರ ಜನ್ಮದಿನದ ಅಂಗವಾಗಿ ನಗರದ ತೋಟಗಾರಿಕೆ ಇಲಾಖೆಯಲ್ಲಿ ಗುರುವಾರ ಏರ್ಪಡಿಸಿದ್ದ ತೋಟಗಾರಿಕೆ ದಿನಾಚರಣೆ, 2024-25ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ವಿಸ್ತರಣೆ ಮತ್ತು ವಿದ್ಯಾರ್ಥಿಗಳಿಗೆ ತೋಟಗಾರಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರಿಗಿಂತಲೂ ಅಧಿಕ ಆದಾಯ ಗಳಿಸಲು ಕೃಷಿಯಲ್ಲಿ ಸಾಧ್ಯವಿದೆ. ಆದರೆ, ಅದಕ್ಕೆ ಪೂರಕ ಶ್ರಮ, ಮಾಹಿತಿಯ ಅಗತ್ಯವಿದೆ. ಕೃಷಿ ದೇಶಸೇವೆ ಕೂಡ ಆಗಿದೆ ಎಂದರು.
ಮಕ್ಕಳಲ್ಲಿ ಬೆಳೆಗಳು, ರೈತರ ಶ್ರಮದ ಬಗ್ಗೆ ಮಾಹಿತಿ ಕೊರತೆ ಇದೆ. ಬೆಳೆಗಳೆಡೆ ಪ್ರಾಥಮಿಕ ಜ್ಞಾನ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ತರಬೇತಿಯನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಂಡು, ಹಣ್ಣು, ತರಕಾರಿ ಬೆಳೆಯಲು ಮುಂದಾಗಬೇಕು. ಮರಿಗೌಡರು ತೋಟಗಾರಿಕೆ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಬೋಗಿ ಮಾತನಾಡಿ, ತೋಟಗಾರಿಕೆ ದಿನದ ಅಂಗವಾಗಿ ಕಿಚನ್‌ಗಾರ್ಡನ್, ಮನೆ ಅಕ್ಕಪಕ್ಕ ಹಣ್ಣಿನ ಗಿಡ ಬೆಳೆಸುವ ಕುರಿತು ಒಂದು ದಿನದ ತರಬೇತಿ ಆಯೋಜಿಸಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಹಣ್ಣು, ತರಕಾರಿಗಳು ಸಾಕಷ್ಟು ರಾಸಾಯನಿಕಗಳಿಂದ ಕೂಡಿದ್ದು, ಮನೆಗೆ ಅಗತ್ಯವಿರುವ ಹಣ್ಣು, ತರಕಾರಿಗಳನ್ನು ಬೆಳೆಯಲು ಸಾಧ್ಯವಿದೆ ಎಂದರು.
ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರು ವಿದ್ಯಾರ್ಥಿಗಳಿಗೆ ತರಕಾರಿ, ಹಣ್ಣಿನ ಬೀಜಗಳ ಕಿಟ್‌ಗಳನ್ನು ವಿತರಿಸಿದರು. ಇಲಾಖೆ ಆವರಣದಲ್ಲಿ ಸಸಿ ನೆಟ್ಟರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿಇಒ ಎಸ್.ನಾಗಭೂಷಣ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಸದಸ್ಯ ವೆಂಕಟೇಶ್, ಕೆಡಿಪಿ ಸದಸ್ಯ ನಾಗರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net