

ಬಾಗಲಕೋಟೆ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವುದರ ಜೊತೆಗೆ ಅವರ ವ್ಯಕ್ತಿತ್ವದ ವಿಕಾಸಕ್ಕೂ ಎನ್‌ಎಸ್‌ಎಸ್ ಸಹಕಾರಿಯಾಗಿದೆ ಎಂದು ನಿವೃತ್ತ ಸಹ ಪ್ರಾಧ್ಯಾಪಕ ಜಿ.ಜೆ.ಮೊರಬ ಹೇಳಿದರು.
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪುರ ಕಲಾ ಮತ್ತು ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಹಾಗೂ ೨, ಮಂಗಳವಾರ ಹಮ್ಮಿಕೊಂಡ ಎನ್‌ಎಸ್‌ಎಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸೇವಾ ಕಾರ್ಯದಲ್ಲಿ ತೊಡಗಿ ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಎನ್‌ಸಿಸಿ ದೇಶದ ರಕ್ಷಣೆಗಿದ್ದರೆ, ಎನ್‌ಎಸ್‌ಎಸ್ ದೇಶವನ್ನು ಕಟ್ಟುವುದರ ಸಲುವಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಘಟನೆ, ನಾಯಕತ್ವ ಗುಣ, ಸಂವಹನ ಕಲೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುವ ಎನ್‌ಎಸ್‌ಎಸ್ ದಲ್ಲಿ ಪಾಲ್ಗೊಳ್ಳಬೇಕು. ಶ್ರಮದಾನದ ಮಹತ್ವವನ್ನು ಅರಿತು ಗ್ರಾಮೀಣ ಸಮಸ್ಯಗಳಿಗೆ ಸ್ಪಂದಿಸಬೇಕು. ಆ ಮೂಲಕ ರಾಷ್ಟ್ರದ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಶ್ರೀನಿವಾಸ ನರಗುಂದ, ಎನ್‌ಎಸ್‌ಎಸ್ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಳಿಲುಸೇವೆ ಮಾಡುವ ಬಯಕೆ ಪ್ರಕಟಗೊಳ್ಳಬೇಕು. ೧೪ನೇ ಶತಮಾನದ ಲಕ್ಷ್ಮೀಧರಾಮಾತ್ಯ ಹಾಗೂ ಶ್ರವಣಬೆಳಗೊಳದ ಶಾಸನಗಳಲ್ಲಿ ಬಿಂಬಿತ ಸೇವೆಯ ಮಹತ್ವವನ್ನು ಯುವಜನತೆ ಅರಿಯಬೇಕು ಎಂದರು.
ನಿಸ್ವಾರ್ಥ ಸಮಾಜ ಸೇವೆ ಮನಸ್ಸಿಗೆ ನೆಮ್ಮದಿ ತರುತ್ತದೆ. ಸಮಾಜ ಸೇವೆಯ ಮೂಲಕ ಶಿಕ್ಷಣ ನೀಡಿ ಯುವಕರಲ್ಲಿ ಉತ್ಸಾಹ, ಚೈತನ್ಯ ತುಂಬುವಲ್ಲಿ ಎನ್‌ಎಸ್‌ಎಸ್ ಸಹಕಾರಿ. ಇಂತಹ ದಿನಾಚರಣೆಗಳಿಂದ ಸ್ಪೂರ್ತಿ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮಾಧಿಕಾರಿ ಎನ್.ಎಚ್.ಹಸಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧಿಕಾರಿ ಎಚ್.ಜಿ.ಗೌಡರ, ಉಪನ್ಯಾಸಕರಾದ ಎಸ್.ಎಂ.ಜೇವೂರ, ಕೆ.ಎಸ್.ದಾಸರ, ಎ.ಎ.ಗಂಗಲ್, ಎನ್.ಎಚ್. ಹವಾಲ್ದಾರ, ಎಸ್.ಪಿ.ದೇಶಪಾಂಡೆ ಇದ್ದರು. ನವೀನ ಪಾಟೀಲ ಸ್ವಾಗತಿಸಿದರು. ಸಿದ್ದಪ್ಪ ಹಿರೇಕುಂಬಿ ನಿರೂಪಿಸಿದರು. ಸಂಗಯ್ಯ ಸಾರಂಗಮಠ ವಂದಿಸಿದರು.