

ಬೀದರ್: ಸಾಹಿತ್ಯದ ಅಭಿರುಚಿ ಹೊಂದಿದ್ದರೆ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದು ಸಾಹಿತಿ ವಿಜಯಲಕ್ಷ್ಮೀ ಕೌಟಗೆ ಹೇಳಿದರು.
ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದಿಂದ ನಗರದಲ್ಲಿ ಶನಿವಾರ ಸಂಜೆ ಆಯೋಜಿಸಿದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಸಾಹಿತ್ಯದಲ್ಲಿ ಆಸಕ್ತಿ ವಹಿಸಬೇಕು. ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ತಮ್ಮ ಸಾಹಿತ್ಯ ಮಾತ್ತು ಸಾಂಸ್ಕೃತಿಕ ಬದುಕಿನ ಜೀವನಾನುಭವ ಹಂಚಿಕೊಂಡ ಕೌಟಗೆ ಅವರು, ಸಾಮಾನ್ಯ ಗೃಹಿಣಿಯಾಗಿದ್ದ ನನಗೆ ಭಾಲ್ಕಿ ಹಿರೇಮಠ ಹಾಗೂ ಬಸವ ಸೇವಾ ಪ್ರತಿಷ್ಠಾನದ ಒಡನಾಟದಿಂದ ವಚನ ಸಾಹಿತ್ಯ ಓದಲು ಅವಕಾಶ ಸಿಕ್ಕಿತು. ಇದು ನನಗೆ ಎಲ್ಲ ರೀತಿಯ ಮೌಢ್ಯತೆ ಬಿಡಿಸಿತು. ಶರಣ ಸಾಹಿತ್ಯದ ಆಳವಾದ ಅಧ್ಯಯನದಿಂದಲೇ ಓದುವ, ಬರೆಯುವ ಹವ್ಯಾಸ ಬೆಳೆಸಿಕೊಂಡು 18 ಪುಸ್ತಕ ಹೊರತಂದಿರುವೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಸಾಧಕರಿಗೆ ತಮ್ಮ ಬದುಕಿನ ವಿವಿಧ ಆಯಾಮಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಉದಾತ್ತ ವೇದಿಕೆ ಇದಾಗಿದೆ ಎಂದು ಹೇಳಿದರು.
ಸಾಹಿತಿ ಡಾ.ಚಂದ್ರಪ್ಪ ಭತಮುರ್ಗೆ ಉದ್ಘಾಟಿಸಿದರು. ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ವಿಜಯಲಕ್ಷ್ಮೀ ಅಲ್ಲಮಪ್ರಭು ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಎಂ.ಜಿ. ದೇಶಪಾಂಡೆ, ಎಂ.ಜಿ. ಗಂಗನಪಳ್ಳಿ, ಡಾ.ಬಸವರಾಜ ಬಲ್ಲೂರ್, ಜಗನ್ನಾಥ ಕಮಲಾಪುರೆ, ವಿಜಯಕುಮಾರ ಪಾಟೀಲ್, ವಿದ್ಯಾವತಿ ಬಲ್ಲೂರ್, ಶ್ರೀದೇವಿ ಪಾಟೀಲ್, ರೂಪಾ ಪಾಟೀಲ್ ಇತರರಿದ್ದರು. ಟಿ.ಎಂ.ಮಚ್ಚೆ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಣೆ ಮಾಡಿದರು. ಅನೀಲ ದೇಶಮುಖ ವಂದಿಸಿದರು.