ವ್ಯಕ್ತಿತ್ವ ವಿಕಸನ ರಂಗ ಶಿಬಿರದ ಆಶಯ

11 RPT 1
ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಳ್ಳಿ ಮಕ್ಕಳ ರಂಗ ಹಬ್ಬ ಶಿಬಿರಕ್ಕೆ ರಂಗಕರ್ಮಿ ಡಾ. ಗಣೇಶ್ ಕೆಂಚನಾಲ ಚಾಲನೆ ನೀಡಿದರು. ದೀಪಾ ಗಣೇಶ್, ಪವನ್ ಕೆರೆಹಳ್ಳಿ, ವಿದ್ಯಾರ್ಥಿಗಳಿದ್ದರು.
Published on

ರಿಪ್ಪನ್‌ಪೇಟೆ: ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ರಂಗಶಿಬಿರದ ತರಬೇತಿ ಸಹಕಾರಿಯಾಗಲಿದೆ ಎಂದು ರಂಗಕರ್ಮಿ ಡಾ. ಗಣೇಶ್ ಕೆಂಚನಾಲ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಳ್ಳಿ ಮಕ್ಕಳ ರಂಗಹಬ್ಬ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ನಾಲ್ಕು ವರ್ಷಗಳಿಂದ ರಂಗ ಶಿಬಿರ ಆಯೋಜಿಸುತ್ತಿದ್ದು, 5ನೇ ವರ್ಷದ ಶಿಬಿರದಲ್ಲಿಯೂ ಹೆಚ್ಚಿನ ಆಸಕ್ತಿಯಿಂದ ಮಕ್ಕಳು ಬಂದಿರುವುದು ರಂಗಕಲೆ ಆಸಕ್ತಿ ಇರುವುದಕ್ಕೆ ಸಾಕ್ಷಿ ಎಂದು ತಿಳಿಸಿದರು.

ಪ್ರತಿ ಕ್ಷಣವೂ, ಪ್ರತಿ ವಿಷಯಕ್ಕೂ ಮೊಬೈಲ್‌ಗಳನ್ನು ಅವಲಂಬಿಸುತ್ತಿರುವ ಹೊತ್ತಿನಲ್ಲಿ ಒಂದಷ್ಟು ದೈಹಿಕ, ಮಾನಸಿಕ ಚಟುವಟಿಕೆಗೆ ರಂಗ ಶಿಬಿರ ಮದ್ದಾಗಬಲ್ಲದು. ಮೂಲತಃ ರಂಗ ಕಲೆಯು ಹಳ್ಳಿಯದ್ದೇ ಆಗಿದ್ದರು ನೇಪತ್ಯಕ್ಕೆ ಸರಿದು ಪಟ್ಟಣಗಳಲ್ಲಿ ನೋಡಬಹುದು. ನಾಟಕ, ಜನಪದ, ಅಭಿನಯ, ಚಿತ್ರಕಲೆ, ಕಥೆ, ಸಂಗೀತದ ಬಗ್ಗೆ ಗ್ರಾಮೀಣ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು ಶಿಬಿರದ ಉದ್ದೇಶ ಎಂದರು.

15 ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ತರಬೇತಿ ನೀಡುವರು. ಶಿಬಿರದ ಅಂತಿಮ ದಿನ ಶಿಬಿರಾರ್ಥಿ ಮಕ್ಕಳಿಂದಲೇ ವಿವಿಧ ಕಲಾ ಪ್ರದರ್ಶನಗಳು ನಡೆಯಲಿವೆ ಎಂದು ತಿಳಿಸಿದರು. ದೀಪಾ ಗಣೇಶ್, ಪವನ ಕೆರೆಹಳ್ಳಿ, ಹರೀಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net