

ಹುಣಸೂರು : ಬೌದ್ಧಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಶಾರೀರಿಕ ತತ್ವಗಳ ಬಗೆಗಿನ ಅರಿವೇ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪ ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಲಿ ನಿರ್ದೇಶಕ ಪ್ರೊ.ಕೆ.ಮಂಟೇಲಿಂಗು ಅಭಿಪ್ರಾಯಪಟ್ಟರು.
ನಗರದ ಗುರುಬೂದಿ ಮಂಗಳಮಂಟಪದಲ್ಲಿ ಜ್ಞಾನಧಾರಾ ಪ್ರಥಮದರ್ಜೆ ಕಾಲೇಜು ವತಿಯಿಂದ ಸೋಮವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನಮ್ಮ ನಡೆ, ನುಡಿಯನ್ನು ಇತರರು ನಮ್ಮನ್ನು ಒಪ್ಪಿಕೊಳ್ಳುವಂತಿರಬೇಕು. ಶಕ್ತಿಶಾಲಿ ಶರೀರದಿಂದ ಮಾತ್ರ ಸದೃಢ ಧ್ವನಿ ಬರಲು ಸಾಧ್ಯ. ಜೀವನದಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ. ಇದೇ ವ್ಯಕ್ತಿತ್ವ ವಿಕಸನಕ್ಕೆ ರಹದಾರಿ ಎಂದರು.
ಕಲಿಯುವ ಆಸಕ್ತಿ, ಇತರರು ಹೇಳುವುದನ್ನು ಅಲಿಸುವ ಮನೋಗುಣ ನಿಮ್ಮದಾಗಲಿ. ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ. ಪ್ರತಿಯೊಬ್ಬರಲ್ಲೂ ಸುಪ್ತವಾಗಿ ಹುದುಗಿರುವ ಜಾಣ್ಮೆ, ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕಾರ್ಯ ಸ್ವಯಂ ನಾವೇ ಮಾಡಿಕೊಳ್ಳಬೇಕು ಎಂದರು.
ನಿಮ್ಮಲ್ಲಿರುವ ಪದಕೋಶಗಳ ಬಳಕೆಯಾಗಲಿ. ವಾಕ್ಚಾತುರ್ಯ, ಗ್ರಹಿಕಾಶಕ್ತಿ ಎಲ್ಲವನ್ನೂ ನೀವೇ ಕಂಡು ಕೊಳ್ಳಬೇಕು. ಜೀವನದಲ್ಲಿ ಒಂದಾದರೂ ಆದರ್ಶವೂ ಇಲ್ಲದಿದ್ದರೆ ಬದುಕಿಗೆ ಅಪಮಾನ. ಹಾಗೆಯೇ ಸಾಧನೆಯೇ ಇಲ್ಲದೆ ಸತ್ತರೆ ಸಾವಿಗೆ ಅಪಮಾನ ಮಾಡಿದಂತೆ. ಹಾಗಾಗಿ ವ್ಯಕ್ತಿತ್ವ ರೂಪಿಸಿಕೊಳ್ಳುವ, ಭವಿಷ್ಯದ ಜೀವನವನ್ನು ಸುಖಮಯವಾಗಿಸುವ ಶಕ್ತಿ ನಿಮ್ಮಲ್ಲೇ ಇದೆ ಎಂದು ಪ್ರೊ.ಕೆ.ಮಂಟೇಲಿಂಗು ಹೇಳಿದರು.ಕೊಡಗು ಜಿಲ್ಲೆ ಸಿದ್ದಲಿಂಗಪುರ ಅರಿಸಿನಕುಪ್ಪೆಯ ಶ್ರೀ ಮಂಜುನಾಥಸ್ವಾಮಿ ಕ್ಷೇತ್ರದ ಶ್ರೀ ರಾಜೇಶ್‌ನಾಥ್ ಗುರೂಜಿ ಸಾನಿಧ್ಯ ವಹಿಸಿದ್ದರು.
ಜ್ಞಾನಧಾರ ಶಿಕ್ಷಣ ಫೌಂಡೇಷನ್ ಅಧ್ಯಕ್ಷೆ ಯಮುನಾ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಬ್ರಿಲಿಯನ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಬಿ.ಪರಮೇಶ್ವರಯ್ಯ ಮಾತನಾಡಿದರು. ಡಾ.ಜೆ.ಸಿ.ನಾಗೇಂದ್ರ , ಪ್ರಾಂಶುಪಾಲ ಎಚ್.ಬಿ.ಕಾರ್ತೀಕ್, ತರಬೇತುದಾರ ಆರ್.ಕೆ.ಬಾಲಚಂದ್ರ, ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರಸನ್ನ ಕುಮಾರ ಕೆರಗೋಡು, ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಪಿ.ಎನ್.ಹೇಮಚಂದ್ರ ವಿಶೇಷ ಉಪನ್ಯಾಸ ನೀಡಿದರು.
ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಜೆಎಸ್‌ಎಸ್ ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ರಮೇಶ್, ಪಿರಿಯಾಪಟ್ಟಣ ಅಕ್ಷರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಿ.ವಿ.ವಿಜಯೇಂದ್ರ ಹಾಜರಿದ್ದರು.