ವ್ಯಕ್ತಿ ವೈಭವೀಕರಣ ಪ್ರಜಾಪ್ರಭುತ್ವಕ್ಕೆ ಮಾರಕ

18ydg06
Published on


ಯಾದಗಿರಿ: ದೇಶದಲ್ಲಿ ಇಂದು ವ್ಯಕ್ತಿ ಪೂಜೆ ಹಾಗೂ ವ್ಯಕ್ತಿ ವೈಭವೀಕರಣ ಜೋರಾಗಿ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆತಂಕ ವ್ಯಕ್ತಪಡಿಸಿದರು.

ಸೋಮವಾರ ನಗರದ ವಾಲ್ಮೀಕಿ ಭವನದಲ್ಲಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಹಮ್ಮಿಕೊಂಡಿದ್ದ ಸಂವಿಧಾನದ ರಕ್ಷಣೆಗಾಗಿ-ಪ್ರಜಾಪ್ರಭುತ್ವದ ಉಳಿವಿಗಾಗಿ ಜಿಲ್ಲಾ ಮಟ್ಟದ ಬೃಹತ್ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ನಮಗೆ ಅನೇಕ ಹಕ್ಕುಗಳನ್ನು ಕಲ್ಪಿಸಿದೆ. ಪ್ರತಿಯೊಬ್ಬರ ಗೌರವಯುತ, ಸ್ವಾಭಿಮಾನದ ಬದುಕಿಗೆ ಶಕ್ತಿ ತುಂಬಿದೆ. ಯಾರೋ ಕೆಲವರು ತಮ್ಮ ಸ್ವಾರ್ಥ, ರಾಜಕೀಯ ಹಿತಾಸಕ್ತಿಯಿಂದ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದರೆ ಸಮಾಜ ಯಾವತ್ತೂ ಒಪ್ಪದು. ಆದರೂ ಇಂತಹ ಹೇಳಿಕೆಗಳು ಬರುತ್ತಿರುವುದು ಅಪಾಯದ ಸೂಚನೆ. ಈ ಬಗ್ಗೆ ಎಚ್ಚರಿಕೆ ವಹಿಸಿ ಜಾಗೃತರಾಗುವ ಅಗತ್ಯವಿದೆ ಎಂದರು.

ಬೀದರ್ ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ಹಸಿವು, ಬಡತನ ವಿಷಯದಲ್ಲೂ ಕೇಂದ್ರ ಸರಕಾರ ಧರ್ಮ ರಾಜಕಾರಣ ಮಾಡುತ್ತಿದೆ. ಖಾಸಗೀಕರಣಕ್ಕೆ ಉತ್ತೇಜನ ಕೊಡುತ್ತ ಕೆಲವೇ ಬಂಡವಾಳಶಾಹಿಗಳನ್ನು ಪೋಷಿಸಲಾಗುತ್ತಿದೆ. ಪುರೋಹಿತಶಾಹಿ ವ್ಯವಸ್ಥೆ ಪುನರುತ್ಥಾನಕ್ಕೆ ಯತ್ನಿಸಲಾಗುತ್ತಿದೆ. ಆಡಳಿತದಲ್ಲಿರುವ ಪಕ್ಷದವರು ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವಾಗ ಸುಮ್ಮನಿರಕೂಡದು. ಧ್ವನಿ ಎತ್ತದಿದ್ದರೆ ಆಪತ್ತು ತಪ್ಪಿದ್ದಲ್ಲ ಎಂದು ಸೂಚ್ಯವಾಗಿ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net