ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ:ಇಬ್ಬರ ಬಂಧನ

ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ:ಇಬ್ಬರ ಬಂಧನ
Published on

ಹೊಳೆನರಸೀಪುರ : ರಾತ್ರಿ 11ರ ಸಮಯದಲ್ಲಿ ಎದುರು ಮನೆಯನ್ನು ಇಣುಕಿ ನೋಡಿದರು ಎಂಬ ಕಾರಣಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ತಾಲ್ಲೂಕಿನ ಎಲೆಗೌಡನಕೊಪ್ಪಲು ಗ್ರಾಮದಲ್ಲಿ ಜ. 21 ರಂದು ನಡೆದಿದೆ.
ಗ್ರಾಮದ ಜಯರಾಮ (50) ಮೃತರು. ಅದೇ ಗ್ರಾಮದ ಮಧು, ರಮೇಶ ಹಾಗು ರಾಜೇಗೌಡ ಕೊಲೆ ಆರೋಪಿಗಳು.
ಜ. 21ರ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದ ಜಯರಾಮ ಅವರು ರಾತ್ರಿ 11ರ ವೇಳೆಗೆ ಮೂತ್ರ ವಿಸರ್ಜನೆಗಾಗಿ ಹೊರ ಬಂದಿದ್ದಾರೆ. ಆಗ ಎದುರಿಗೆ ಇರುವ ಮಧು ಅವರ ಮನೆಯನ್ನು ಇಣುಕಿ ನೋಡಿದ್ದಾರೆ ಎನ್ನಲಾಗಿದೆ.
ಇದನ್ನು ನೋಡಿದ ತಕ್ಷಣ ಮಧು ಬಾಗಿಲು ತೆರೆದು ಜಯರಾಮ ಅವರನ್ನು ಓಡಿಸಿಕೊಂಡು ಬಂದಿದ್ದಾನೆ. ದೊಣ್ಣೆಯಿಂದ ಕೈ, ಕಾಲಿಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾನೆ. ಅಲ್ಲಿಂದ ಎಳೆದುಕೊಂಡು ಬಂದು ಲೈಟ್ ಕಂಬಕ್ಕೆ ಕಟ್ಟಿ ಹಾಕಿದ್ದಾನೆ. ಅಲ್ಲಿಗೆ ಮಧುನ ಚಿಕ್ಕಪ್ಪ ರಾಜೇಗೌಡ ಹಾಗು ಆತನ ಪುತ್ರ ರಮೇಶ ಬಂದಿದ್ದಾರೆ. ರಾಜೇಗೌಡನ ಸೂಚನೆಯಂತೆ ಇಬ್ಬರೂ ಸೇರಿ ಕಲ್ಲಿನಿಂದ ಜಜ್ಜಿದ್ದಾರೆ. ಅಷ್ಟರಲ್ಲಿ ಊರವರೆಲ್ಲ ಸೇರಿ ಜಗಳ ಬಿಡಿಸಿದ್ದಾರೆ. ಆದರೆ ಅಷ್ಟರಲ್ಲಿ ಜಯರಾಮ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮಧು ಮತ್ತು ರಮೇಶನು ಒಟ್ಟಾಗಿ ಜಯರಾಮ ಅವರನ್ನು ಮನೆಯ ಒಳಗೆ ಮಲಗಿಸಿ ವಾಪಸ್ಸಾಗಿದ್ದಾರೆ.
ಜಯರಾಮ ಕುಟುಂಬಸ್ಥರು ಇರಲಿಲ್ಲ:
ಜ. 21ರ ರಾತ್ರಿ ಮೃತ ಜಯರಾಮ ಅವರ ಕುಟುಂಬಸ್ಥರು ಮನೆಯಲ್ಲಿ ಇರಲಿಲ್ಲ. ಪತ್ನಿ ಪ್ರಮೀಳಾ ಅವರ ತಂದೆ ಸಾವಿಗೀಡಾಗಿದ್ದರಿಂದ ಪುತ್ರ ಧನು, ಪುತ್ರಿ ಪುಣ್ಯ, ಪ್ರಮೀಳಾ ಹಾಗು ಜಯರಾಮ ಮೈಸೂರು ಜಿಲ್ಲೆಯ ಸಾಲಿಗ್ರಾಮದ ತಾಲ್ಲೂಕಿನ ಕೆಸವತ್ತೂರು ಕೊಪ್ಪಲು ಗ್ರಾಮಕ್ಕೆ ಅಂತ್ಯ ಸಂಸ್ಕಾರಕ್ಕಾಗಿ ತೆರಳಿದ್ದರು. ಕಾರ್ಯ ಬೇಗ ಮುಗಿಯದ ಹಿನ್ನಲೆ ಜಯರಾಮ ಅವರು ಜಾನುವಾರುಗಳ ಆರೈಕೆಗಾಗಿ ರಾತ್ರಿ 10 ಗಂಟೆಗೆ ವಾಪಸ್ಸಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಮಧು ಹಾಗು ರಮೇಶನನ್ನು ಪೊಲೀಸರು ಬಂಧಿಸಿದ್ದಾರೆ. ರಾಜೇಗೌಡ ನಾಪತ್ತೆಯಾಗಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net