ವ್ಯಂಗ್ಯಚಿತ್ರಗಳು ನೋಡುಗರ ಮನತಟ್ಟಲಿವೆ

46
Published on

ಮೈಸೂರು: ವ್ಯಂಗ್ಯಚಿತ್ರಗಳು ನೇರವಾಗಿ ನೋಡುಗರ ಮನ ತಟ್ಟುವ ಜತೆಗೆ ತುಂಬಾ ಅರ್ಥಗರ್ಭಿತ, ಪರಿಣಾಮಕಾರಿ ಎಂದು ಮೈಸೂರು ಆರ್ಟ್ ಗ್ಯಾಲರಿ ಸಂಸ್ಥಾಪಕರಾದ ಕಲಾವಿದ ಎನ್.ಬಿ. ಕಾವೇರಪ್ಪ ಅಭಿಪ್ರಾಯಪಟ್ಟರು.
ರಾಮಾನುಜ ರಸ್ತೆಯ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ವ್ಯಂಗ್ಯ ಚಿತ್ರಕಾರ ಎಂ.ವಿ. ನಾಗೇಂದ್ರಬಾಬು ಅವರು ‘ನಿಮ್ಮ ಮತ, ನಿಮ್ಮ ಭವಿಷ್ಯ’ ವಿಷಯವಾಗಿ ರಚಿಸಿರುವ ವ್ಯಂಗ್ಯ ಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಎಂ.ಟಿ.ವಿ. ಆಚಾರ್ಯ, ರಾಮಮೂರ್ತಿ ಮುಂತಾದ ಹಿರಿಯ ಕಲಾವಿದರ ವ್ಯಂಗ್ಯಚಿತ್ರಗಳನ್ನು ಬರೆಯುವ ಮೂಲಕ ವ್ಯಂಗ್ಯಚಿತ್ರಕ್ಕೆ ಹೆಚ್ಚು ಮೌಲ್ಯ ತಂದುಕೊಟ್ಟಿರುವ ನರೇಂದ್ರಬಾಬು ಅವರು ಫುಲ್ ಬ್ರೈಟ್ ಸ್ಕಾಲರ್ ಪಡೆದ ಶ್ರೇಷ್ಠ ಕಲಾವಿದರು. ಪ್ರಸ್ತುತ ಚುನಾವಣಾ ಸಂದರ್ಭದಲ್ಲಿ ಇವರು ರಚಿಸಿರುವ ವ್ಯಂಗ್ಯಚಿತ್ರಗಳು ನೋಡುಗರ ಕಣ್ಮನವನ್ನು ಸೆಳೆಯುತ್ತವೆ. ಇನ್ನಷ್ಟು ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಿ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಲಿ ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಸಮಾಜಸೇವಕ ಕೆ. ರಘುರಾಮ ವಾಜಪೇಯಿ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net