

ಹುಮನಾಬಾದ್: ಮಾಣಿಕನಗರದ ಶ್ರೀ ಮಾಣಿಕಪ್ರಭು ಮಂದಿರದಲ್ಲಿ ಜಾತ್ರೋತ್ಸವ ನಿಮಿತ್ತ ಪೀಠಾಧಿಪತಿ ಶ್ರೀ ಡಾ.ಜ್ಞಾನರಾಜ ಪ್ರಭು ಸಾನ್ನಿಧ್ಯದಲ್ಲಿ ವಿಶೇಷ ಪೂಜೆಯೊಂದಿಗೆ ವೈಶಿಷ್ಟ್ಯಪೂರ್ಣ ದಕ್ಷಿಣೆ ದರ್ಬಾರ್ ಶುಕ್ರವಾರ ಜರುಗಿತು.
ಬೆಳಗೆ ಶ್ರೀ ಪ್ರಭು ಸಂಜೀವಿನಿ ಸಮಾಧಿಗೆ ಮಹಾ ರುದ್ರಾಭಿಷೇಕ, ನೂರಾರು ವೈದಿಕರು, ವೇದಪಾಠ ಶಾಲೆ ಮಕ್ಕಳ ರುದ್ರಪಠಣ, ಮಧ್ಯಾಹ್ನ ವೈಶಿಷ್ಟ್ಯಪೂರ್ಣ ದಕ್ಷಿಣೆ ದರ್ಬಾರ್ ಕಾರ್ಯಕ್ರಮವನ್ನು ರಾಜ-ಮಹಾರಾಜರ ದರ್ಬಾರ್ ಮೀರಿಸುವಂತೆ ನಡೆಯಿತು. ರಾಷ್ಟ್ರ-ರಾಜ್ಯ ಮಟ್ಟದ ಕಲಾವಿದರು ಭಾಗವಹಿಸಿದ್ದು ಈ ದರ್ಬಾರ್ ವಿಶೇಷ.
ಸಂಸ್ಥಾನದ ಸಚಿವರಾವ ಆನಂದರಾಜ ಪ್ರಭು ದರ್ಬಾರ್‌ಗೆ ಚಾಲನೆ ನೀಡಿ ಮಾತನಾಡಿ, ದಕ್ಷಿಣೆ ಮಹತ್ವ ವಿವರಿಸಿದರು. ವಿವಿಧಡೆಯಿಂದ ಆಗಮಿಸಿದ ಕಲಾವಿದರು ತಮ್ಮ ಅಮೋಘ ಸಂಗೀತ ಸೇವೆಯನ್ನು ಪ್ರಭು ಚರಣಗಳಿಗೆ ಅರ್ಪಿಸಿದರು.
ಶ್ರೀ ಡಾ.ಜ್ಞಾನರಾಜ ಪ್ರಭು ಕಲಾವಿದರನ್ನು ಗೌರವಿಸಿ ಆಶೀರ್ವದಿಸಿದರು. ಸಂಗೀತ ಸವಿಯೊಂದಿಗೆ ಶ್ರೀಗಳಿಂದ ದಕ್ಷಿಣೆ ಕೊಡುವ ಕಾರ್ಯ ಸಾಂಗವಾಗಿ ನೆರವೇರಿತು. ದಕ್ಷಿಣೆ ಪಡೆಯುವ ಹಕ್ಕುಳ್ಳ ಫಕೀರ, ಜಂಗಮ, ಗೋಸ್ವಾಮಿ, ಶರಣ-ಸಂತರು, ವೈದಿಕರು, ಪುರೋಹಿತ ವರ್ಗ, ವೇದ ಪಾಠಶಾಲೆ ಮಾಜಿ-ಹಾಲಿ ವಿದ್ಯಾರ್ಥಿಗಳು, ಋತ್ವಿಜರೆಲ್ಲರಿಗೂ ದಕ್ಷಿಣೆ ಕೊಟ್ಟು ಸಂತೈಸಿ ಶ್ರೀಗಳು ಆಶೀರ್ವದಿಸಿದರು. ರಾತ್ರಿ ಪ್ರದೋಷ ಪೂಜೆ ನಂತರ ಮಹಾಪ್ರಸಾದ ಜರುಗಿತು.
ಜಾತ್ರೆಯಲ್ಲಿ ವಸ್ತು ಖರೀದಿಗೆ ದಕ್ಷಿಣೆ ಅನುವು: ಅರಿಶಿಣ-ಕುಂಕುಮ, ಬೆಂಡು-ಬತ್ತಾಸು, ಪೇಡೆ, ಹೆಣ್ಮಕ್ಕಳಿಗೆ ಬಳೆ-ರಿಬ್ಬನ್ ಖರೀದಿಸಿ ಜಾತ್ರೆ ಮಾಡಿಸಲು ಅನುವು ಮಾಡಿಕೊಡಲು ದಕ್ಷಿಣೆ ನೀಡುವುದು ಈ ದರ್ಬಾರ್ ವಿಶೇಷ. ಪೌರ್ಣಿಮೆ ದರ್ಬಾರ್ ನಂತರ ವಾಪಸ್ ಹೋದ ಭಕ್ತರಿಗೆ ಮನೆಯಲ್ಲಿ ಏನು ತಂದಿದ್ದೀರಿ ಎಂದು ಕೌತುಕದಿಂದ ಕೇಳುತ್ತಾರೆ. ಮನೆ ಮಂದಿಗೆಲ್ಲ ನಿರಾಸೆ ಮಾಡದಿರಲಿ ಎಂದು ಶ್ರೀ ಮಾಣಿಕಪ್ರಭುಗಳ ಕಾಲದಿಂದಲೂ ನಡೆದುಬಂದ ವಾಡಿಕೆ ದಕ್ಷಿಣೆ ಕೊಡುವುದು. ಶ್ರೀ ಮಾಣಿಕಪ್ರಭು ದರ್ಬಾರ್‌ನಲ್ಲೂ ಕುಳಿತಲ್ಲೇ ತಮ್ಮ ಆಸನದ ಕೆಳಗೆ ಕೈ ಹಾಕಿ ಬಂದಷ್ಟು ದಾನ ಮಾಡುತ್ತಿದ್ದರು.
ನಿಜಾಮ ಸರ್ಕಾರದ ಹಣವೂ ದಾನ: ಹಿರಿಯರ ಪ್ರಕಾರ ತೃತೀಯ ಪೀಠಾಧೀಶ್ವರ ಶ್ರೀಮಾರ್ತಂಡ ಪ್ರಭುಗಳ ದರ್ಬಾರ್‌ನಲ್ಲಿ ಒಂದೊಮ್ಮೆ ಹಣದ ಅಗತ್ಯ ಉಂಟಾಗಿತ್ತಂತೆ. ಅದೇ ವೇಳೆ ಕುದುರೆ ಸವಾರಿ ಮೂಲಕ ನಿಜಾಮ ಸರ್ಕಾರದ ಕಂದಾಯ ವಸೂಲಿ ಹಣ ಹೈದರಾಬಾದ್‌ಗೆ ಸಾಗಿಸುತ್ತಿದ್ದರಂತೆ. ಇದನ್ನರಿತ ಮಾರ್ತಂಡ ಪ್ರಭುಗಳು ಕುದುರೆ ನಿಲ್ಲಿಸಿ ನಿಜಾಮ ಸರ್ಕಾರದ ಪ್ರತಿನಿಧಿ ಬಳಿ ಇದ್ದ ಹಣವನ್ನೆಲ್ಲ ತೆಗೆದುಕೊಂಡು ದಾನ ಮಾಡಿದರಂತೆ. ಮುಂದೆ ನಿಜಾಮ ಪ್ರತಿನಿಧಿ ತನ್ನ ಮೇಲಧಿಕಾರಿಗೆ ಮಾರ್ತಂಡ ಪ್ರಭುಗಳು ಮಾಡಿದ ಬಗ್ಗೆ ತಿಳಿಸಿದಾಗ, ಮಾಣಿಕಪ್ರಭು ಜಾತ್ರಾ ಖರ್ಚು ಎಂದು ಸರ್ಕಾರಿ ವೆಚ್ಚಕ್ಕೆ ಸೇರಿಸಲು ತಿಳಿಸಿದರಂತೆ. ಅಂದಿನಿಂದ ಪ್ರತಿವರ್ಷ ಜಾತ್ರೆಗೆಂದು ಹಣ ಮೀಸಲು ಇಡುತ್ತಿದ್ದರಂತೆ. ಅಂದರೆ ನಿಜಾಮ ಸರ್ಕಾರಕ್ಕೂ ದಕ್ಷಿಣೆ ದರ್ಬಾರ್ ಮಹತ್ವ ತಿಳಿದಿತ್ತಂತೆ.