ವೈರುಧ್ಯ ಮರೆತು ಒಗ್ಗೂಡಿದರೆ ಅಖಂಡ ಭಾರತ ನಿರ್ಮಾಣ: ರಾಮ್ ಮಾಧವ್ ಅಭಿಮತ

1
Published on

ಮೈಸೂರು: ನಮ್ಮೆಲ್ಲರ ಮನಸ್ಸುಗಳು ಒಗ್ಗೂಡಿದರೆ, ನಾವು ಕಳೆದುಕೊಂಡಿರುವ ಪ್ರದೇಶಗಳು ತಾವಾಗಿಯೇ ಅಖಂಡ ಭಾರತದ ವ್ಯಾಪ್ತಿಗೆ ಬರುತ್ತವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕೇಂದ್ರ ಕಾರ್ಯಕಾರಿಣಿ ಸದಸ್ಯ ರಾಮ್ ಮಾಧವ್ ಆಶಯ ವ್ಯಕ್ತಪಡಿಸಿದರು.
ಮಂಥನ ಮೈಸೂರು ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾವು ಬರೆದಿರುವ ಪಾರ್ಟಿಷನ್ಡ್ ಫ್ರೀಡಂ (ವಿಭಜಿತ ಸ್ವಾತಂತ್ರ್ಯ) ಇಂಗ್ಲಿಷ್ ಕೃತಿ ಮರು ಬಿಡುಗಡೆ ಹಾಗೂ ಸಂವಾದದಲ್ಲಿ ಅವರು ಮಾತನಾಡಿದರು.
ಬ್ರಿಟಿಷರು ಧರ್ಮದ ತಳಹದಿಯಲ್ಲಿ ಹಿಂದು–, ಮುಸ್ಲಿಮರನ್ನು ವಿಭಜಿಸಿದ್ದರು. ಆದರೆ ಈಗಲೂ ನಾವು ಬೇರೆ ಬೇರೆಯಾಗಿರುವುದು ಸರಿಯಲ್ಲ. ದೇಶದಲ್ಲಿರುವ ಎಲ್ಲರೂ ಒಗ್ಗೂಡಬೇಕು. ಐಕ್ಯತೆ ಕಾಪಾಡಿಕೊಳ್ಳಬೇಕು. ದೇಶ ಒಗ್ಗೂಡುವುದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಾಗಬೇಕು ಎಂದು ಪ್ರತಿಪಾದಿಸಿದರು.
ಎಲ್ಲ ವೈರುಧ್ಯವನ್ನು ಮರೆತು ನಮ್ಮೆಲ್ಲರ ಮನಸ್ಸುಗಳು ಒಗ್ಗೂಡಿದರೆ, ನಾವು ಕಳೆದುಕೊಂಡಿರುವ ಪ್ರದೇಶಗಳು ತಾವಾಗಿಯೇ ಅಖಂಡ ಭಾರತದ ವ್ಯಾಪ್ತಿಗೆ ಬರುತ್ತವೆ. ಅಖಂಡ ಭಾರತ ನಿರ್ಮಾಣಕ್ಕಾಗಿ 130 ಕೋಟಿ ಜನರ ಹೃದಯಗಳು ಒಗ್ಗೂಡಬೇಕು. ಇದನ್ನು ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಮಾಡಲಾಗದು. ಎಲ್ಲರೂ ಕೈಜೋಡಿಸಬೇಕು. ವಿಭಜನೆ ಎನ್ನುವುದು ಕೇವಲ ನೆಲದ ವಿಭಜನೆಯಷ್ಟೇ ಅಲ್ಲ, ಮನಸ್ಸುಗಳೂ ಬೇರೆ ಬೇರೆಯಾಗಿ ಭಾವನೆಗಳು ಚೂರಾಗುತ್ತವೆ ಎನ್ನುವುದನ್ನು ಮರೆಯಬಾರದು ಎಂದರು.
ಹಿಂದುಗಳಲ್ಲೂ ಕೆಲವರು ನಾವೆಲ್ಲರೂ ಒಟ್ಟಿಗೆ ಬದುಕಲಾಗುವುದಿಲ್ಲ ಎನ್ನುವ ಭಾವನೆಯಲ್ಲಿದ್ದಾರೆ. ಇದು ದೂರವಾಗಬೇಕು. ಹೃದಯಗಳನ್ನು ಒಡೆಯುವುದನ್ನೂ ನಿಲ್ಲಿಸಬೇಕು. ಅಂತಹ ಕೆಲಸ ಮಾಡುವ ಶಕ್ತಿಗಳನ್ನು ಎಲ್ಲರೂ ಒಗ್ಗಟ್ಟಿನಿಂದ ಧಿಕ್ಕರಿಸಬೇಕು. ಮನಸ್ಸು– ಮನಸ್ಸುಗಳ ನಡುವೆ ಸೇತುವೆ ನಿರ್ಮಿಸಬೇಕು. ಆಗ ಆಕ್ರಮಿಸಿಕೊಂಡಿರುವ ನಮ್ಮ ಭಾರತದ ಜಾಗಗಳೂ ನಮ್ಮದಾಗುತ್ತವೆ ಎಂದು ಆಶಿಸಿದರು.
ಸ್ವತಃ ಮುಸ್ಲಿಂ ಮುಖಂಡರೇ ವಿರೋಧಿಸಿದ್ದ ಮಹಮ್ಮದ್ ಅಲಿ ಜಿನ್ನಾಗೆ ಕಾಂಗ್ರೆಸ್ ನಾಯಕರು ಬಹಳ ಆದ್ಯತೆ ನೀಡಿ ತಪ್ಪು ಮಾಡಿದರು. ಆತ ಮುಸ್ಲಿಮರ ನಾಯಕನೆಂದು ಬಿಂಬಿಸಿದ್ದೂ ತಪ್ಪಾಯಿತು. ಈಗ ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಇದ್ದೇವೆ. ಇಲ್ಲಿ ನಿಂತು ಹಿಂದಿನ ಕಾಲಘಟ್ಟದಲ್ಲಿ ಏನು ನಡೆಯಿತು, ಏನಾಯಿತು ಎನ್ನುವುದೇ ಇತಿಹಾಸ ಎಂದರು.
ಆಗ ಇತಿಹಾಸ ಬರೆದವರ ಭಾವಕ್ಕೆ ಏನು ಅನಿಸಿತೋ ಅದನ್ನು ಬರೆದಿರುವುದು ಅವರಿಗೆ ಸೇರುವಂಥದ್ದು. ಅವರು ಅರ್ಥ ಮಾಡಿಕೊಂಡಿದ್ದನ್ನು ಬರೆದಿರಬಹುದು. ನಾವು ಆ ಕಾಲದಲ್ಲಿ ಇರಲಿಲ್ಲವಾದ್ದರಿಂದ ಹಾಗೂ ನೋಡಿಲ್ಲವಾದ್ದರಿಂದ ಯಾರನ್ನೂ ಟೀಕಿಸುವುದರಿಂದ ಪ್ರಯೋಜನವಿಲ್ಲ. ಆದರೆ ಆ ಇತಿಹಾಸದಿಂದ ಪಾಠವನ್ನು ಕಲಿಯಬೇಕಾಗುತ್ತದೆ ಎಂದು ಹೇಳಿದರು.
ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಮಾತನಾಡಿ, ಇತಿಹಾಸ ಎಂದರೆ ರಾಜಕೀಯದ್ದಷ್ಟೇ ಎಂದು ಭಾವಿಸಿದ್ದೇವೆ. ಇತರ ಹಲವು ವಿಷಯಗಳನ್ನೂ ಗ್ರಹಿಸಬೇಕು. ಭಾರತದ ಇತಿಹಾಸ ಬಹಳ ಸಂಕೀರ್ಣವಾದುದು ಹಾಗೂ ಭಾವನಾತ್ಮಕವಾದುದೂ ಆಗಿದೆ ಎಂದು ಹೇಳಿದರು.
ಮಂಥನ ಮೈಸೂರು ಸಂಘಟಕ ವಿಶ್ವನಾಥ್ ಸಂವಾದ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net