

ರೋಣ: ಚೀನಾದಲ್ಲಿ ಕಾಣಿಸಿಕೊಂಡಿರುವ ಮಿಡಲ್ ಈಸ್ಟ್ ರೆಸ್ಫಿರೇಟರಿ ಸಿಂಡ್ರೋಮ್ ಕೊರೊನರಿ (ಕರೊನಾ) ವೈರಸ್ ನೆಗಡಿ ಹಾಗೂ ಶ್ವಾಸಕೋಶ ಸೋಂಕಿಗೆ ಕಾರಣವಾಗುತ್ತದೆ. ಇದಕ್ಕೆ ಒಳಗಾದವರು ನ್ಯುಮೋನಿಯಾಕ್ಕೆ ತುತ್ತಾಗಿ ಸಾವನ್ನಪ್ಪುತ್ತಾರೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ ಇಲಾಖೆಯ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ವೈಯಕ್ತಿಕ ಶುಚಿತ್ವ, ಕೆಮ್ಮು, ನೆಗಡಿ ಸೀನುವಾಗ ಬಾಯಿಗೆ ಕರವಸ್ತ್ರ ಹಿಡಿದುಕೊಳ್ಳಬೇಕು. ಇಲ್ಲವೇ ಮಾಸ್ಕ್ ಬಳಸುವುದು ಒಳ್ಳೆಯದು ಎಂದರು.
ತಾಪಂ ಇಒ ಸಂತೋಷ ಪಾಟೀಲ ಮಾತನಾಡಿ, ‘ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ತರಬೇತಿ ನೀಡಿ ಪ್ರಾಥಮಿಕ ಹಂತದ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತುರ್ತಾಗಿ ಚಿಕಿತ್ಸೆ ನೀಡಿ, ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ತೆಗೆದುಕೊಂಡು ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು’ ಎಂದರು.
ಡಾ. ರಘು ಹೊಸೂರ, ಡಾ. ಸುನೀಲ ಸಾರಂಗಮಠ, ಡಾ.ಮಲ್ಲಮ್ಮ ಹೊಸಮನಿ, ಡಾ. ಎ.ಬಿ. ಹೊಸಮನಿ, ಡಾ. ದಾನಮ್ಮ ಹುಲಕುಂದ, ತಾಲೂಕು ಹಿರಿಯ ಆರೋಗ್ಯ ಮೇಲ್ವಿಚಾರಕ ಬಿ.ಆರ್. ಪಾಟೀಲ, ಘನಶ್ಯಾಮ ಹೋಳಿ, ಮನೋಹರ ಕಣ್ಣಿ, ವಿಜಯ ತುಕೋಳ, ಕೆ.ಬಿ. ಶ್ಯಾಶೆಟ್ಟಿ, ಮಂಜುನಾಥ ಹಡಪದ, ಪಿಎಸ್ಐ ಪರಮೇಶ್ವರ ಕವಟಗಿ, ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್, ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಎಲ್. ಕೆ. ಗಡಗಿ, ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ವಿಜಯಕುಮಾರ ಕಾಗವಾಡೆ ಇತರರಿದ್ದರು.
ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಿ
ಡಂಬಳ: ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸರಿಯಾಗಿ ಬೇಯಿಸಿದ ಆಹಾರ ಪದಾರ್ಥ ಸೇವಿಸಬೇಕು. ನಿತ್ಯ ಬಳಸುವ ನೀರಿನ ಟ್ಯಾಂಕ್, ಬಕೆಟ್ ಮುಂತಾದ ನೀರು ಸಂಗ್ರಹ ಪರಿಕರಗಳಲ್ಲಿ ಹೆಚ್ಚು ದಿನದ ನೀರನ್ನು ಸಂಗ್ರಹಿಸಿಡಬಾರದು ಎಂದು ಡಂಬಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಸಹಾಯಕ ಬಿ.ಬಿ. ನೀಡಗುಂದ ಹೇಳಿದರು.
ಸ್ವಚ್ಛತಾ ಅಭಿಯಾನ ಹಾಗೂ ಚಿಕೂನ್ಗುನ್ಯಾ, ಡೆಂಘೆ, ಕರೊನಾ ಮತ್ತಿತರ ಸಾಂಕ್ರಾಮಿಕ ರೋಗಗಳ ಕುರಿತು ಡಂಬಳ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜ್ವರ, ಕೆಮ್ಮು, ತಲೆ ನೋವು, ನೆಗಡಿ, ಉಸಿರಾಟ ಸಮಸ್ಯೆ ಕಂಡುಬಂದರೆ ತಕ್ಷಣ ತಾಲೂಕು, ಜಿಲ್ಲಾ ಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿಯೊಬ್ಬರೂ ಸ್ವಚ್ಛತೆ ಆದ್ಯತೆ ನೀಡಬೇಕು ಎಂದರು. ಎಂ.ಎನ್. ಚಿಂತಗುಂಟಿ ಮತ್ತು ಎಸ್. ಬಾರಕೇರಿ, ಪ್ರವೀಣ ಬಿದರಳ್ಳಿ, ಉದಯ ಎಂ. ಇದ್ದರು.
ಲಕ್ಷ್ಮೇಶ್ವರದ ಜಾನುವಾರು ಸಂತೆ ರದ್ದು
ಲಕ್ಷ್ಮೇಶ್ವರ: ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಲಕ್ಷ್ಮೇಶ್ವರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮಾ. 20 ರಂದು ನಡೆಯಲಿರುವ ಜಾನುವಾರು ಸಂತೆಯನ್ನು ರದ್ದು ಪಡಿಸಲಾಗಿದೆ. ಆದ್ದರಿಂದ ರೈತರು, ವ್ಯಾಪಾರಸ್ಥರು, ಖರೀದಿದಾರರು ಅಂದು ಮಾರುಕಟ್ಟೆಗೆ ಜಾನುವಾರು, ಕುರಿ ಹಾಗೂ ಮೇಕೆಗಳನ್ನು ತರಬಾರದು ಎಂದು ಎಪಿಎಂಸಿ ಕಾರ್ಯದರ್ಶಿ ಎನ್.ಎ. ಲಕ್ಕುಂಡಿ ತಿಳಿಸಿದ್ದಾರೆ.
ಪರೀಕ್ಷಾರ್ಥಿಗಳು, ಸಿಬ್ಬಂದಿಗೆ ಉಚಿತ ಮಾಸ್ಕ್
ನರೇಗಲ್ಲ: ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಕಾಲೇಜ್ನ ದ್ವಿತೀಯ ಪಿಯು ಪರೀಕ್ಷೆ ಬರೆಯುತ್ತಿರುವ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಕಾಲೇಜ್ ವತಿಯಿಂದ ಮಂಗಳವಾರ ಮಾಸ್ಕ್ ವಿತರಿಸಲಾಯಿತು. ಪ್ರಾಚಾರ್ಯ ವೈ.ಸಿ. ಪಾಟೀಲ ಮಾತನಾಡಿ, ಪರೀಕ್ಷಾ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಉಚಿತವಾಗಿ ಮಾಸ್ಕ್ ವಿತರಿಸಲಾಗಿದೆ ಎಂದರು. ಸಿಬ್ಬಂದಿ ವಿದ್ಯಾಸಾಗರ, ಎಫ್.ಎನ್. ಹುಡೇದ, ಪಿ.ಎನ್. ಬಳೂಟಗಿ, ಎಂ.ಎ. ನದಾಫ್, ಪಿ.ವೈ. ಕರಮುಡಿ, ಜಿ.ಎಸ್. ಮಠಪತಿ, ವಿಶ್ವನಾಥ ಕೋಡಿಕೊಪ್ಪಮಠ, ರಮೇಶ ಕುಲಕರ್ಣಿ, ವಿರೂಪಾಕ್ಷಪ್ಪ ಸಂಗನಾಳ ಇತರರಿದ್ದರು.