ವೈಯಕ್ತಿಕ ವಿಚಾರಗಳನ್ನ ಬದಿಗಿಟ್ಟು, ರೈತರಿಗಾಗಿ ಒಟ್ಟಾಗಬೇಕು:ದರ್ಶನ್ ಪುಟ್ಟಣ್ಣಯ್ಯ

ವೈಯಕ್ತಿಕ ವಿಚಾರಗಳನ್ನ ಬದಿಗಿಟ್ಟು, ರೈತರಿಗಾಗಿ ಒಟ್ಟಾಗಬೇಕು:ದರ್ಶನ್ ಪುಟ್ಟಣ್ಣಯ್ಯ
Published on

ಹಾಸನ: ರೈತ ಸಂಘದಲ್ಲಿ ಇರುವಂತಹ ಪ್ರತಿಯೊಬ್ಬರೂ ತಮ್ಮ ತಮ್ಮ ವೈಯಕ್ತಿಕ ವಿಚಾರಗಳನ್ನ ಬದಿಗಿಟ್ಟು, ರೈತರ ಸಮಸ್ಯೆಯನ್ನ ಮುಂದಿಟ್ಟುಕೊಂಡು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದರು.
ನಗರದ ಹಾಸನಾಂಬ ಕಲಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈತ ಒಡನಾಡಿಗಳ ಜೊತೆ ಸಂವಾದ ಹಾಗು ಡೈರೆಕ್ಟ್ ಆಕ್ಷನ್ ಎಂಬ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟದ ಕಥೆಯ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತ ಸಂಘವನ್ನು ಕಟ್ಟಲು ಅದೆಷ್ಟೋ ಜನ ರೈತರು ತಮ್ಮ ಮನೆ,ಸಂಸಾರವನ್ನೆಲ್ಲ ಬಿಟ್ಟು ಜೀವನವನ್ನೇ ತ್ಯಾಗ ಮಾಡಿದ್ದಾರೆ. ಇಂತಹ ಸಂಘಟನೆಯನ್ನು ಮೂಲೆಗುಂಪು ಮಾಡದೆ, ನಾವೆಲ್ಲರೂ ಉಳಿಸಿ ಬೆಳೆಸಬೇಕಾಗಿದೆ. ನಿಮ್ಮ ಮಾರ್ಗದರ್ಶನದಲ್ಲಿ ನಾನೊಬ್ಬ ಕಾರ್ಯಕರ್ತನಾಗಿ ಕೆಲಸ ಮಾಡಲು ಶತಸಿದ್ಧ ಎಂದು ಹೇಳಿದರು.
ರೈತ ಸಂಘಟನೆ ಬಣಗಳಾಗದೆ ಎಲ್ಲರೂ ಒಗ್ಗಟ್ಟಿನಿಂದ ರೈತರ ಪರವಾಗಿ ಧ್ವನಿ ಎತ್ತುವಂತಹ ಕೆಲಸವಾಗಬೇಕು ಎಂಬುದು ನನ್ನ ಆಸೆ. ಈ ಹಿಂದೆ ಈ ಸಂಘಟನೆಗೆ ಎಷ್ಟು ದೊಡ್ಡ ಶಕ್ತಿ ಇತ್ತು ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ, ಅದು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ. ಆದ್ದರಿಂದ ನಾವೆಲ್ಲರೂ ತಮ್ಮೆಲ್ಲ ವೈಯಕ್ತಿಕ ವಿಚಾರಗಳನ್ನ ಬಿಟ್ಟು ರೈತರ ಪರವಾಗಿ ದೊಡ್ಡ ಧ್ವನಿಯಾಗಿ ರಾಜ್ಯದಲ್ಲಿ ನಿಲ್ಲಬೇಕು ಎಂದು ಹೇಳಿದರು.
ರೈತ ಸಂಘಟನೆಗೆ ನಮ್ಮದೆಯಾದ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಹಿಂದೆ ಸಂಘಟನೆ ಎಷ್ಟು ಗಟ್ಟಿಯಾಗಿತ್ತು ಎಂಬುದನ್ನು ವಿಡಿಯೋಗಳಲ್ಲಿ ನೋಡಿ ತಿಳಿದುಕೊಂಡಿದೇನೆ, ನಮ್ಮ ತಂದೆಯೊಂದಿಗೆ ಹಲವು ಹೋರಾಟದಲ್ಲಿ ಭಾಗವಹಿಸಿ ನೋಡಿದ್ದೇನೆ, ಮುಂದಿನ ದಿನಗಳಲ್ಲಿ ರೈತ ಸಂಘಟನೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.
ರೈತ ಸಂಘಟನೆ ಮುಂಖಡ ಕೆ.ಟಿ.ಗಂಗಾಧರ್ ಮಾತನಾಡಿ, 1980ರ ರೈತರ ಚಳುವಳಿ ನವಲಗುಂದ, ನರಗುಂದ, ಗಜೇಂದ್ರಗಡ, ನಿಪ್ಪಾಣಿ ಸೇರಿ ವಿವಿಧೆಡೆ ನಡೆದ ಹೋರಾಟದಲ್ಲಿ 156 ಜನರನ್ನು ಪೊಲೀಸರು ಗುಂಡಿಕ್ಕಿ ಕೊಂದರು. ಆಕಸ್ಮಿಕವಾಗಿ ಗುಂಡು ತಗುಲಿ ರೈತರು ಸಾಯಲಿಲ್ಲ, ನಿರ್ಧಾಕ್ಷಣ್ಯವಾಗಿ ಕೊಲ್ಲಲಾಯಿತು. ಕೊಲ್ಲುತ್ತಾರೆ ಎಂದು ಗೊತ್ತಿದ್ದರೂ ಮಹಿಳೆಯರು, ಮಕ್ಕಳು ಹೋರಾಟದಲ್ಲಿ ಭಾಗವಹಿಸಿದರು. ರೈತ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದವರು ಜೈಲಿನಲ್ಲಿ ಇಡಲು ಸಾಧ್ಯವಾಗದೆ ತೆರೆದ ಜೈಲಿನ ವ್ಯವಸ್ಥೆ ಮಾಡಲಾಗಿತ್ತು. ಇದೆಲ್ಲ ರೈತ ಚಳುವಳಿಯನ್ನು ನಿಯಂತ್ರಿಸಲು ಸರ್ಕಾರ ಮಾಡಿದ ಕುತಂತ್ರ. ಇದನ್ನೆಲ್ಲ ದಿಕ್ಕೆಡಿಸಿ ಚಳುವಳಿ ಕಟ್ಟಿದ್ದೇವೆ ಎಂದರೆ ಅದು ರೈತ ಚಳುವಳಿಗೆ ಇರುವ ಶಕ್ತಿ. ರೈತ ಚಳುವಳಿಯ ಗರ್ಭ ಚೆನ್ನಾಗಿಯೇ ಇದೆ ಆದರೆ, ಸಂತಾನ ಅಭಿವೃದ್ಧಿ ತಡವಾಗುತ್ತಿದೆ ಎಂದರು.
ಇಡೀ ಜಗತ್ತಿನಲ್ಲಿ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ, ಐಎಂಎಫ್ ಹೇಳಿದ ಹಾಗೆಯೇ ಭಾತರದ ಪ್ರಧಾನಿ ಸೇರಿ ಎಲ್ಲರೂ ಕೇಳಬೇಕಾದ ಪರಿಸ್ಥಿತಿ ಇಂದು ವಿಶ್ವಮಟ್ಟದಲ್ಲಿ ನಿರ್ಮಾಣವಾಗಿದೆ. ಇದನ್ನು ಮಟ್ಟ ಹಾಕಿ ದೇಶದ ಸಂಪತ್ತನ್ನು ಹೆಚ್ಚಿಸಬೇಕು. ಪ್ರಧಾನಿ ಮೋದಿ ಹೇಳುವಂತೆ ಆತ್ಮನಿರ್ಭರ ಭಾರತವನ್ನು ಕಟ್ಟಬೇಕಾದರೆ ಆತ್ಮ ಇರುವ ಜನರ ಸಂಖ್ಯೆ ದುಪ್ಪಟ್ಟಾಗಬೇಕು. ಐಎಂಎಫ್‌ಗೆ ಉತ್ತರ ನೀಡಲು ಜನಪರ ಹೋರಾಟಕ್ಕೆ ಮಾತ್ರ ಸಾಧ್ಯವಿದೆ. ಯಾವುದೇ ಪಕ್ಷ, ಸರ್ಕಾರವನ್ನು ಬದಲಾವಣೆ ಮಾಡಿದರೂ ಸಾಧ್ಯವಿಲ್ಲ. ಚಳುವಳಿಯಿಂದ ಮಾತ್ರ ವ್ಯವಸ್ಥೆ ಬದಲಾಯಿಸಲು ಸಾಧ್ಯ ಎಂದು ಹೇಳಿದರು.
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವನಂದ ತಗಡೂರು ಮಾತನಾಡಿ, ಜಿಲ್ಲೆಯಲ್ಲಿ ನಡೆದ ಬಾಗೂರು-ನವಿಲೆ ಹೋರಾಟದಲ್ಲಿ ಹಲವು ರೈತರು ಲಾಠಿ, ಬೂಟು ಎಟು ತಿಂದು ನೋವು ಅನುಭವಿಸಿ ರೈತರ ಪರ ಚಳುವಳಿ ಕಟ್ಟಿದರು. ರೈತರ ಹೋರಾಟ ಹತ್ತಿಕ್ಕಲು ಪೊಲೀಸರು ಕಾರ್ಫ್ಯೂ ಜಾರಿ ಮಾಡಿದ್ದರಿಂದ ಗ್ರಾಮದಲ್ಲಿದ್ದ ಗಂಡಸರೆಲ್ಲ ಊರು ತೊರೆಯುವಂತಾಗಿತು. ಆ ಸಂದರ್ಭದಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದು ನಮ್ಮ ಹೋರಾಟಕ್ಕೆ ಪ್ರೊ.ನಂಜುಂಡಸ್ವಾಮಿ ಅವರು ಹುರುಪು ತುಂಬಿದರು. ಆದರಿಂದು ಇತ್ತೀಚೆಗೆ ರೈತ ಸಂಘದ ನಾಯಕರು ಚದುರು ಹೋಗಿದ್ದಾರೆ, ಈಗಲಾದರೂ ಒಟ್ಟಾದರೆ ಸಂಘಟನೆ ಮುಂದೆ ಹೋಗುತ್ತದೆ. ರಾಜ್ಯದಲ್ಲಿ ಮತ್ತೊಮ್ಮೆ ರೈತ ಸಂಘ ಕಟ್ಟುವ ಅಗತ್ಯವಿದೆ. ಸಭೆಯಲ್ಲಿ ಮಾತನಾಡುವುದು, ಸಲಹೆ ನೀಡುವುದು ಸುಲಭ ಆದರೆ ಸಂಘಟನೆ ಮಾಡುವುದು ಕಷ್ಟ. ಆದರಿಂದು ಜಿಲ್ಲೆಯಿಂದಲೇ ರೈತ ಸಂಘಟನೆ ಬಲಗೊಳ್ಳುತ್ತಿದೆ ಎಂದು ಹೇಳಿದರು.
ರೈತ ಸಂಘಟನೆ ಮುಖಂಡರಾದ ಅನುಸೂಯಮ್ಮ ಮಾತನಾಡಿ, 80ರ ದಶಕ ರೈತರು ಅಸಹಾಯಕವಾಗಿದ್ದರಿಂದ ಸಾಲ ವಸೂಲಾತಿಗಾಗಿ ರೈತರ ಮನೆಗಳನ್ನು ಜಪ್ತಿ ಮಾಡಲಾಗುತ್ತಿತ್ತು. ಇಡೀ ದೇಶಕ್ಕೆ ರೈತ ಅನ್ನ ನೀಡಿದರೂ ಆತನ ಮನೆಯನ್ನು ಬ್ಯಾಂಕ್‌ನವರಿಂದ ಜಪ್ತಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು, ಆಗ ನಮ್ಮ ನೆರವಿಗೆ ಬಂದಿದ್ದು ರೈತ ಸಂಘಟನೆ. ಪ್ರಸ್ತುತ ಅದೇ ರೀತಿ ಔಷಧ, ಗೊಬ್ಬರ, ಬೀಜದ ಕಂಪನಿಗಳು ನಮ್ಮನ್ನು ಆಳುತ್ತಿವೆ, ಅದಕ್ಕೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿವೆ. ಆದ್ದರಿಂದ ಎಂಎಸ್‌ಬಿ, ಹೊಸಹಾತುಶಾಹಿ, ಕುಲಾಂತರಿ ತಳಿ ವಿರುದ್ಧ ಹೋರಾಟ ಮಾಡಬೇಕಾದರೆ ಮತ್ತೊಮ್ಮೆ ರೈತ ಸಂಘಟನೆ ಗಟ್ಟಿಗೊಳ್ಳಬೇಕಿದೆ ಎಂದು ಹೇಳಿದರು.
ರೈತರ ಸಂಘಟನೆ ಮುಖಂಡ ಡಾ.ಹನುಮಂತೇಗೌಡ ಅವರು ಮಾತನಾಡಿ, ಭತ್ತ, ರಾಗಿ, ಜೋಳ, ಕಾಳುಗಳನ್ನು ಭೂಮಿಯಿಂದ ಬೆಳೆಯಬೇಕೇ ಹೊರತು ಯಾವುದೇ ಕಾರ್ಖಾನೆಯಿಂದ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಅಹಾರ ಧಾನ್ಯವನ್ನು ಉತ್ಪಾದನೆ ಮಾಡುವಂತಹ ದೊಡ್ಡ ಕಾರ್ಖಾನೆಯನ್ನು ರೈತರು ಮುನ್ನಡೆಸುತ್ತಿದ್ದಾರೆ. ಆದ್ದರಿಂದ ರೈತ ಸಮಸ್ಯೆಗಳಿಗೆ ಸ್ಪಂದಿಸಲು ರೈತ ಸಂಘಟನೆಯನ್ನು ಬಲಗೊಳಿಸಬೇಕಾಗಿದೆ. ಸಂಘಟನಕಾರರು ದಾರಿ ತಪ್ಪಿದ್ದಾರೆ. ಪ್ರಸ್ತುತ ನಮ್ಮ ಮುಂದೆ ಜಾತಿ, ಧರ್ಮ, ಬಡತನವಿದೆ, ಬೌದ್ಧಿಕ ದಾರಿದ್ರ್ಯವಿದೆ. ಇದನ್ನು ಅರ್ಥ ಮಾಡಿಕೊಂಡು ಶುದ್ಧ ಚಾರಿತ್ರ್ಯ, ಸತ್ಯ, ತತ್ವಕ್ಕೆ ಬದ್ಧರಾಗಿ, ವಿಶಾಲ ಮನೋಭಾವದಿಂದ ಹೋರಾಟವನ್ನು ಮುನ್ನಡೆಸಬೇಕೆಂದು ಹೇಳಿದರು.
ಕಾರ್ಐಕ್ರಮದಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್, ಹೆರಗು ವಾಸುದೇವ್, ಮಾತನಾಡಿದರು. ಸಂಘದ ಮುಖಂಡ ಪ್ರೊ.ಕೆ.ಸಿ.ಬಸವರಾಜು, ಕಣಗಾಲ್ ಮೂರ್ತಿ, ನಂದಿನಿ ಜಯರಾಮ್, ನಂಜುಂಡೇಗೌಡ, ಕೆ.ಟಿ.ಶಿವಪ್ರಸಾದ್, ಗುರುಸ್ವಾಮಿಗೌಡ, ಷಾಡ್ರಾಕ್, ವಿಷ್ಣುಕುಮಾರ್, ಮಂಜುನಾಥ್ ಮತ್ತಿತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net