ವೈಯಕ್ತಿಕ ವಿಚಾರ ಮಾತನಾಡಿದರೆ ಸರಿ ಇರಲ್ಲ...!

ksm 26-2
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಸುತ್ತಿರುವುದು.
Published on

ಕೂಡಲಸಂಗಮ: ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದರೆ ಸರಿ ಇರಲ್ಲ. ನಾನು ವಿಭೂತಿ ಧರಿಸುವ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ವೈಯಕ್ತಿಕವಾಗಿ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಹೇಳಿಕೆ ನೀಡಿದರೆ ನಾನೂ ಎಲ್ಲಾ ಬಿಟ್ಟು ನಿಲ್ಲಬೇಕಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

ಮಂಗಳವಾರ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಜ್ಯ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೂಡಲಸಂಗಮದ ಬಸವಜಯಮತ್ಯುಂಜಯ ಸ್ವಾಮೀಜಿಯವರು ಬಸವನಗೌಡ ಪಾಟೀಲ ಯತ್ನಾಳ ಅವರ ಮಾತು ಕೇಳಿ ಹೋರಾಟ, ಸಭೆ ಮಾಡುವುದಾದರೆ ಬಿಜೆಪಿ ಪಕ್ಷದ ಬ್ಯಾನರ್ ಅಡಿ ಹೋರಾಟ ಮಾಡಲಿ. 2ಎ ಮೀಸಲಾತಿ ಹೋರಾಟ ಪಕ್ಷಾತೀತ ಹೋರಾಟ. ಇದಕ್ಕೆ ಯಾವುದೇ ಪಕ್ಷದ ಮುದ್ರೆ ಬೇಡ. ಸ್ವಾಮೀಜಿ ಯಾರನ್ನು ಕೇಳಿ ಟ್ಯಾಕ್ಟರ್ ರ‌್ಯಾಲಿ, ಸುವರ್ಣ ಸೌಧ ಮುತ್ತಿಗೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ ಶಾಸಕರು, ಇಡೀ ಪಂಚಮಸಾಲಿ ಸಮಾಜ ಬೆನ್ನಿಗೆ ಇದೆ ಎಂದು ಹೇಳುವ ಯತ್ನಾಳ ಸ್ವಂತ ಬಲದ ಮೇಲೆ ಹೋರಾಟ ಮಾಡಲಿ, ಸಮಾಜದ ಹೆಸರನ್ನು ಬಳಕೆ ಮಾಡುವುದನ್ನು ಬಿಡಲಿ ಎಂದು ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2ಸಿ, 2ಡಿ ಮೀಸಲಾತಿಯನ್ನು ನೀಡಿತ್ತು. ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನಾವು 2ಸಿ, 2ಡಿ ಮೀಸಲಾತಿ ಪಡೆಯುತ್ತಿಲ್ಲ. ಅದು ನಮಗೆ ಬೇಡ ನಮಗೆ ಬೇಕಾಗಿರುವುದು 2ಎ ಮೀಸಲಾತಿ ಮಾತ್ರ. ಅದು ಬಿಜೆಪಿ ಸರ್ಕಾರ ಮೀಸಲಾತಿ ಕಲ್ಪಿಸಿದಾಗ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಹಿಂದೆ ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನು ನಮ್ಮ ಸರ್ಕಾರ ಮಾಡಲ್ಲ. ನಮ್ಮ ಸರ್ಕಾರ ಮೀಸಲಾತಿ ಕಲ್ಪಿಸುವ ಭರವಸೆ ಇದೆ. ನಮ್ಮ ಸರ್ಕಾರದಲ್ಲಿಯೇ ಮೀಸಲಾತಿ ಪಡೆದೆ ಪಡೆಯುತ್ತೇವೆ ಎಂದರು.

ಬಸವ ಜಯಮತ್ಯುಂಜಯ ಸ್ವಾಮೀಜಿ, ಬಸನಗೌಡ ಪಾಟೀಲ ಯತ್ನಾಳ ಅಲ್ಲಲ್ಲಿ ಸಭೆ ನಡೆಸಿದ್ದಾರೆ. ಅದಕ್ಯಾವುದಕ್ಕೂ ರಾಷ್ಟ್ರೀಯ ಅಧ್ಯಕ್ಷನಾಗಿರುವ ನನ್ನಗೆ ಆಹ್ವಾನಿಸಿಲ್ಲ. ಈ ಪೀಠವನ್ನು ಮಾಡಿದ್ದು ನಾವು. ನಮ್ಮ ತಂದೆಯ ಕಾಲದಿಂದಲೂ ನಮ್ಮ ಕುಂಟುಬ, ನಾನು ಹೋರಾಟ ಮಾಡುತ್ತಲೇ ಬಂದಿದ್ದೆವೆ. ಪೂಜ್ಯರು ಅಂದು ಯಾವ ಪಕ್ಷದ ಮುಖಂಡರು, ನಾಯಕರು ಪಾದಯಾತ್ರೆಯನ್ನು ಮಾಡಲಿಲ್ಲ ಎಂದು ಹೇಳಿದರು.

ಅಲ್ಲದೇ ಒಂದು ಪಕ್ಷದ ಅಡಿಯಲ್ಲಿ ವಕ್ಫ್ ಹೋರಾಟದಲ್ಲಿ ಪೂಜ್ಯರು ಭಾಗವಹಿಸಿರುವುದನ್ನು ಖಂಡಿಸುತ್ತೇವೆ. ನಮ್ಮದು ಪಕ್ಷಾತೀತ ಮಠ. ಸಮಾಜದ ಎಲ್ಲರೂ ಕೂಡಿ ಪೀಠ ಮಾಡಿದ್ದು. ಮಠದಲ್ಲಿ ಪೂಜ್ಯರೂ ಇರುವ ಕಾರ್ಯಮಾಡಬೇಕು. ಒಂದು ದಿನವೂ ಮಠದಲ್ಲಿ ಇರುವುದಿಲ್ಲ. ಮಠದಲ್ಲಿ ಸಭೆ ಮಾಡುವುದಿಲ್ಲ ಎಂದು ಆರೋಪಿಸಿದರು.

ಸಭೆಯಲ್ಲಿ ಅಮರೇಶ ನಾಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನೂನು ಸಲಹೆಗಾರ ದಿನೇಶ ಪಾಟೀಲ, ಕಲಬುರ್ಗಿ ಜಿಲ್ಲಾಧ್ಯಕ್ಷ ಶರಣು ಕೊಪ್ಪ ಮುಂತಾದವರು ಮಾತನಾಡಿದರು.

ಟ್ರಸ್ಟಿಗಳಾದ ಶೇಖರಪ್ಪ ಬಾದವಾಡಗಿ, ಶಿವಾನಂದ ಕಂಠಿ, ಗಂಗಣ್ಣ ಬಾಗೇವಾಡಿ, ಮುಖಂಡರಾದ ಸಂಗಮೇಶ ದೊಡಮನಿ, ಶಂಕ್ರಪ್ಪ ನೇಗಲಿ, ಶೇಖರಗೌಡ ಗೌಡರ, ಶೇಖಪ್ಪ ದೇಶಿ, ಮಹಾಂತೇಶ ಪಾಟೀಲ, ಸಂಗಪ್ಪ ಹೂಲಗೇರಿ, ಮಹಾಂತೇಶ ಅವಾರಿ, ಅನಿಲ ಪಾಟೀಲ ಮುಂತಾದವರು ಇದ್ದರು. ಸಭೆಯಲ್ಲಿ 200ಕ್ಕೂ ಅಧಿಕ ಪದಾಧಿಕಾರಿಗಳು ಭಾಗವಹಿಸಿದ್ದರು.

ಮುರುಗೇಶ ನಿರಾಣಿಗೆ ಆಹ್ವಾನ: ಈ ಹಿಂದೆ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ವಿರುದ್ಧ ಹಿಗ್ಗಾಮುಗ್ಗಾ ಕಿಡಿಕಾರಿದ್ದ ವಿಜಯಾನಂದ ಕಾಶಪ್ಪನವರ ಅವರು ಈಗ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೂಡಲಸಂಗಮದ ಬಸವಜಯಮತ್ಯುಂಜಯ ಸ್ವಾಮೀಜಿಯವರ ವಿರುದ್ಧ ಕಿಡಿ ಕಾರಿದ್ದಲ್ಲದೇ, ಮುರುಗೇಶ ನಿರಾಣಿಯವರನ್ನು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಗೆ ಆಹ್ವಾನಿಸಲಾಗುವುದು ಎಂದು ಹೇಳಿರುವುದು ಬಾರಿ ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net