

ಮೈಸೂರು: ನಾಡಿನ ಸಾಂಸ್ಕೃತಿಕ ಸಿರಿ, ಪರಂಪರೆಯ ಐಸಿರಿಯ ಪ್ರತೀಕವಾಗಿರುವ ವಿಶ್ವ ಪ್ರಸಿದ್ಧ ಜಂಬೂ ಸವಾರಿ ಮೆರವಣಿಗೆಯ ವೈಭವದಿಂದ ಗುರುವಾರ ನೆರವೇರಿತು.
ನೆತ್ತಿ ಸುಡುವ ಸೂರ್ಯ ಪ್ರಖರತೆ, ಮಳೆಯ ಸಿಂಚನದ ನಡುವೆಯೂ ವಿಜಯದಶಮಿ ಮೆರವಣಿಗೆ ಸಹಸ್ರಾರು ಜನಸಮೂಹದ ಸಮ್ಮುಖದಲ್ಲಿ ಸಾಂಗವಾಗಿ ನಡೆಯುವ ಮೂಲಕ ದಸರೆ ಸಂಪನ್ನಗೊಂಡಿತು.
ಅಪರೂಪದ ‘ವೃದ್ಧಿ ದಸರೆ’ ಅಂಗವಾಗಿ 11 ದಿನ ಕಾಲ ನವರಸ ಉಣಬಡಿಸಿದ ನಾಡಹಬ್ಬದ ಕೊನೆಯ ಘಟ್ಟವಾಗಿರುವ ವಿಜಯದಶಮಿ ಮೆರವಣಿಗೆ ಮಧ್ಯಾಹ್ನ 1.10ರ ಹೊತ್ತಿಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ನಂದಿಧ್ವಜ ಪೂಜೆಯೊಂದಿಗೆ ಅದ್ದೂರಿಯಾಗಿ ಚಾಲನೆ ದೊರೆಯಿತು.
ತದನಂತರ ಅರಮನೆ ಒಳಾವಣರದಲ್ಲಿ ಸಂಜೆ 4.40ಕ್ಕೆ ಗಜಪಡೆಯ ನಾಯಕ ಅಭಿಮನ್ಯು ಹೊತ್ತುಕೊಂಡಿದ್ದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪ ನಮನ ಸಲ್ಲಿಸಿದರು.
ಈ ಹೊತ್ತಿನಲ್ಲಿ ಪೊಲೀಸ್ ವಾದ್ಯ ತಂಡ ನುಡಿಸಿದ ಸುಶ್ರಾವ್ಯ ರಾಷ್ಟ್ರಗೀತೆ ಪ್ರತಿಧ್ವನಿಸಿತು. ಈ ಹಿಮ್ಮೇಳದಲ್ಲಿ ಸಿಡಿಸಿದ 21 ಕುಶಾಲು ತೋಪುಗಳು ಅರಮನೆಯ ಆವರಣದಲ್ಲಿ ಝೇಂಕರಿಸಿದವು. ಬಳಿಕ ಮುಂದಕ್ಕೆ ಸಾಗಿದ ನಾಡದೇವಿಯನ್ನು ಕಂಡ ಜನರಿಂದ ಜಯಘೋಷ ಮೊಳಗಿತು.
ನಾಡಿನ ಸಾಧನೆ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು, ಕಲಾತಂಡಗಳ ಆಕರ್ಷಿಸಿದವು. ಬನ್ನಿಮಂಟಪದಲ್ಲಿ ಸಂಜೆ ಆಯೋಜಿಸಿದ್ದ ಪಂಜಿನ ಕವಾಯತು ಸಹ ರೋಮಾಂಚನಗೊಳಿಸಿತು.