ವೈಭವದ ಉತ್ಸವಾಂಬೆ ಉಯ್ಯಲೋತ್ಸವ

Ucchhangi Yallamma Devi
Published on

ಚಿತ್ರದುರ್ಗ: ರಾಜಬೀದಿ ದೊಡ್ಡಪೇಟೆಯ ಉತ್ಸವಾಂಬ ಉಯ್ಯಲೆ ಕಂಬದಲ್ಲಿ ಶನಿವಾರ ಕೋಟೆನಗರಿಯ ಶಕ್ತಿದೇವತೆ ಉಚ್ಚಂಗಿ ಯಲ್ಲಮ್ಮ ದೇವಿಯ ಉಯ್ಯಲೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.

ಭರತ ಹುಣ್ಣಿಮೆ ಅಂಗವಾಗಿ ಭಕ್ತರ ಕೋರಿಕೆ ಹಾಗೂ ಇಚ್ಛೆಯಂತೆ ಬಹಳ ವರ್ಷಗಳ ನಂತರ ನೆರವೇರಿದ ಅಲಂಕೃತ ದೇವಿಯ ಉಯ್ಯಲೋತ್ಸವದ ವೇಳೆ ನೆರೆದಿದ್ದ ಭಕ್ತರಿಂದ ಉಧೋ ಉಧೋ ಎಂಬ ಹರ್ಷೋದ್ಘಾರ ಮುಗಿಲುಮುಟ್ಟಿತು.

ಉಯ್ಯಲೋತ್ಸವಕ್ಕೂ ಮುನ್ನ ಹೊಂಬಾಳೆ, ಮಲ್ಲಿಗೆ, ಕನಕಾಂಬರ, ಗುಲಾಬಿ, ಸೇವಂತಿ ಸೇರಿ ವಿವಿಧ ಬಗೆಯ ಪುಷ್ಪ, ಅತ್ಯಾಕರ್ಷಕ ವಸ್ತುಗಳಿಂದ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಸೇವೆ ನೆರವೇರಿತು. ನಂತರ ಸಿಹಿನೀರು ಹೊಂಡದಲ್ಲಿ ಗಂಗಾ ಪೂಜೆಗೆ ಕರೆತರಲಾಯಿತು.

ನಂತರ ಮೆರವಣಿಗೆಗೆ ಚಾಲನೆ ದೊರೆಯಿತು. ಕಹಳೆ, ಉರುಮೆ, ಕರಡಿ ಚಮ್ಮಾಳ ಸೇರಿ ವಿವಿಧ ಜನಪದ ಕಲಾತಂಡಗಳು, ಗೊಂಬೆ ವೇಷಧಾರಿಗಳು ಮೆರುಗು ನೀಡಿದವು. ಸಂಗೊಳ್ಳಿ ರಾಯಣ್ಣ, ಗಾಂಧಿ ವೃತ್ತ, ಬಿ.ಡಿ.ರಸ್ತೆ, ಧರ್ಮಶಾಲಾ ರಸ್ತೆ, ಚಿಕ್ಕಪೇಟೆ, ದೊಡ್ಡಪೇಟೆ ಸೇರಿ ನಗರದ ರಾಜ ಬೀದಿಗಳಲ್ಲಿ ಸಾಗಿದ ಮೆರವಣಿಗೆ ದೇಗುಲ ತಲುಪಿತು.

ಗರ್ಭಗುಡಿಯ ಮೂರ್ತಿಗೂ ವಿವಿಧ ವರ್ಣದ ಬಳೆ ಹಾಗೂ ಬೃಹತ್ ಹೂವಿನ ಹಾರದಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು.

ಮುಂಜಾನೆಯಿಂದಲೇ ದೇಗುಲದಲ್ಲಿ ದೇವಿಗೆ ಅಭಿಷೇಕ, ಇನ್ನಿತರೆ ವಿಶೇಷ ಪೂಜೆ ನಡೆದವು. ಅಪಾರ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ವೈಭವೋಪೇತ ವಿದ್ಯುದ್ದೀಪಾಲಂಕಾರ ಕೂಡ ಹಲವರನ್ನು ಸೆಳೆಯಿತು. ನೆರೆದಿದ್ದ ಭಕ್ತರು ಮಹಾಮಂಗಳಾರತಿ ಪಡೆದು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net