

ಸಕಲೇಶಪುರ: ನೂರು ದಿನ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ಜನರ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದರು.
ಕಾಂಗ್ರೆಸ್ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ನಾಲ್ಕೈದು ಜಿಲ್ಲೆಗಳಿಂದ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಮೈಸೂರಿಗೆ ಕರೆಸಿಕೊಂಡು ತನ್ನ ವೈಫಲ್ಯವನ್ನು ಮರೆಮಾಚಲು ದೊಡ್ಡ ಕಾರ್ಯಕ್ರಮ ಮಾಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಹೇಮಾವತಿ ನೀರನ್ನು ನಂಬಿಕೊಂಡು ಕೆಳಜಿಲ್ಲೆಗಳ ರೈತರು ವಿವಿಧ ಬೆಳೆಗಳನ್ನು ಬೆಳೆದಿದ್ದು, ಇದೀಗ ನೀರು ಬಿಡದಿದ್ದರೆ ರೈತರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. 20 ಸಾವಿರ ರೂ.ಗೂ ಹೆಚ್ಚು ಖರ್ಚು ಮಾಡಿ ಬೆಳೆ ಬೆಳೆಯುವ ರೈತ ಕುಟುಂಬಕ್ಕೆ ಸರ್ಕಾರ 2 ಸಾವಿರ ರೂ. ನೀಡಿ ಅನ್ಯಾಯ ಮಾಡಲಾಗುತ್ತಿದೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ತಮಿಳುನಾಡಿನ ಒಲೈಕೆ ಮಾಡಲು ಕಾವೇರಿ ನೀರು ಬಿಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ 135 ಶಾಸಕರನ್ನು ಹೊಂದಿದ್ದರೂ ಇನ್ನು ಹೆಚ್ಚಿನ ಅಧಿಕಾರಕ್ಕಾಗಿ ಕಳೆದ 20 ದಿನಗಳಿಂದ ವಿರೋಧ ಪಕ್ಷಗಳ ಶಾಸಕರನ್ನು ಹಾಗೂ ಮುಖಂಡರನ್ನು ಸೆಳೆಯಲು ಪ್ರಯತ್ನ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಮುಖಾಂತರ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಆದರೆ ನಮ್ಮ ಪಕ್ಷದ ಯಾವ ಶಾಸಕರು ಹಾಗೂ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುವುದಿಲ್ಲ. ಹಿಂದೆ ಹಲವು ಬಾರಿ ಜೆಡಿಎಸ್ ಅಧಿಕಾರ ಕಳೆದುಕೊಂಡರೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟಲಾಗಿದೆ. ಈ ಚುನಾವಣೆಯಲ್ಲಿ ಸೋಲಾಗಿರುವುದು ನಿಜ. ಇದಕ್ಕೆ ನಾವು ಅಂಜದೆ ಮುಂದಿನ ದಿನಗಳಲ್ಲಿ ಸದೃಢವಾಗಿ ಪಕ್ಷ ಕಟ್ಟುತ್ತೇವೆ. ರಾಜ್ಯಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಯಾವುದೇ ನ್ಯಾಯ ದೊರಕುವುದಿಲ್ಲ. ಜೆಡಿಎಸ್‌ನಿಂದ ಮಾತ್ರ ರಾಜ್ಯಕ್ಕೆ ನ್ಯಾಯ ದೊರಕುತ್ತದೆ ಎಂದರು.
ರಾಜ್ಯ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಹಾಗೂ ರೈತರಿಗೆ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ಕೊಡಲು ಮುಂದಾಗಬೇಕು. ಏನಾದರೂ ಗ್ಯಾರಂಟಿ ಕೊಟ್ಟಿಕೊಳ್ಳಲಿ, ಅದು ಜನರ ತೆರಿಗೆಯಿಂದ ತಾನೆ ಕೊಡುವುದು. ಸರ್ಕಾರ ಬೇಕಾಬಿಟ್ಟಿ ಗ್ಯಾರಂಟಿಗಳನ್ನು ಕೊಡುವ ಬದಲು ಶಿಕ್ಷಣಕ್ಕೆ ಆದ್ಯತೆ ಕೊಡಲಿ, ಇಂದು ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಇದೆ. ಶಿಕ್ಷಣಕ್ಕೆ ಒತ್ತು ಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಾಳ್ಳು ಜಗನ್ನಾಥ್, ತಾಲೂಕು ಅಧ್ಯಕ್ಷ ಕೆ.ಎಲ್. ಸೋಮಶೇಖರ್, ಮುಖಂಡರಾದ ಸಚ್ಚಿನ್ ಪ್ರಸಾದ್, ಸ.ಭಾ ಭಾಸ್ಕರ್ ಹಾಜರಿದ್ದರು.