ವೈದ್ಯೆಯರ ವಿರುದ್ಧ ಆರ್‌ಟಿಐ ಕಾರ್ಯಕರ್ತರ ದುರ್ನಡತೆ: ವೈದ್ಯಾಧಿಕಾರಿಗಳ ಸಂಘದಿಂದ ಪ್ರತಿಭಟನೆ

03_HSN_01
Published on

ಹಾಸನ: ಆರ್‌ಟಿಐ ಕಾರ್ಯಕರ್ತರು ತುಂಬಾ ಬೆದರಿಕೆ ಹಾಕಿದ್ದು, ವೈದ್ಯರ ಧೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಬುಧವಾರ ಸಂಜೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಲಾಯಿತು.

ಇದೆ ವೇಳೆ ಸಂತ್ರಸ್ತೆ ಆಲೂರು ತಾಲೂಕು ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ನಿಸಾರ್ ಫಾತಿಮಾ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮಾ.29ರಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬಿ.ವಿ. ಭಾನುಪ್ರಕಾಶ್ ಎಂಬ ಆರ್‌ಟಿಐ ಕಾರ್ಯಕರ್ತರು ವೈದ್ಯಾಧಿಕಾರಿಯಾದ ನನ್ನ ಮೇಲೆ ಏರು ಧ್ವನಿಯಲ್ಲಿ ಮಾತನಾಡಿ, ಕೈ ಬೆರಳು ಸನ್ನೆಮಾಡುತ್ತಾ ಮಹಿಳಾ ವೈದ್ಯಾಧಿಕಾರಿಗಳ ಘನತೆಗೆ ದಕ್ಕೆ ತರುವಂತಹ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ದೂರಿದರು.

ಇದು ನಮ್ಮ ಮಹಿಳಾ ವೈದ್ಯಾಧಿಕಾರಿಗಳು ಮತ್ತು ಇಡೀ ವೈದ್ಯ ಸಮೂಹದ ಆತ್ಮಸ್ಥೆರ್ಯ ಕುಗ್ಗಿಸುವಂತಹ ವರ್ತನೆಯಾಗಿದ್ದು, ಹಗಲಿರುಳು ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ವೈದ್ಯಾಧಿಕಾರಿಗಳ ಘನತೆಗೆ ಕುತ್ತು ತರುವಂತಹ ಘಟನೆಯಾಗಿರುತ್ತದೆ. ಇಂತಹ ಘಟನೆಗಳು ಆರ್‌ಟಿಐ ಕಾರ್ಯಕರ್ತರು ಅಥವಾ ಇನ್ನಿತರಿಂದ ವೈದ್ಯರ ಘನತೆಗೆ ಕುತ್ತು ತರದಂತೆ ತಾವು ಕ್ರಮ ವಹಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಬಿ.ಎಂ. ವಿಜಯ್ ಮಾತನಾಡಿ, ಕಳೆದ ಮೂರು ದಿನಗಳ ಹಿಂದೆ ಜಿಲ್ಲಾ ಆರೋಗ್ಯ ಕಚೇರಿಯಲ್ಲಿ ಮಹಿಳಾ ಆರೋಗ್ಯಾಧಿಕಾರಿ ಡಾ. ನಿಸಾರ್ ಫಾತಿಮಾ ವಿರುದ್ಧ ಆರ್.ಟಿ.ಐ. ಅಡಿಯಲ್ಲಿ ಒಂದು ಮೇಲ್ಮನವಿ ಸಲ್ಲಿಸಲಾಗಿದ್ದು, ಪರಿಶೀಲನೆ ನಡೆಸುವ ವೇಳೆ ಮಹಿಳಾ ವೈದ್ಯಾಧಿಕಾರಿಗಳ ಮೇಲೆ ಆರ್.ಟಿ.ಐ. ಕಾರ್ಯಕರ್ತ ಅಸಭ್ಯವಾಗಿ ವರ್ತಿಸಿ ಅವರ ಘನತೆಗೆ ಚ್ಯುತಿ ಬರುವಂತೆ ನಡೆದುಕೊಂಡಿದ್ದಾರೆ. ಹಗಲಿರುಳು ಸಾರ್ವಜನಿಕ ಸೇವೆಯಲ್ಲಿರುವಾಗ ಇಂತಹ ಆರ್‌ಟಿಐ ಕಾರ್ಯಕರ್ತರಿಂದ ಈ ಘಟನೆ ನಡೆದಿದ್ದು, ಮುಂದೆ ನಡೆಯದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಇದೆ ವೇಳೆ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಡಾ. ಎಂ.ವಿ. ಸಂತೋಷ್, ಖಜಾಂಚಿ ಡಾ. ಎಚ್.ಜೆ. ತೇಜಸ್ವಿ, ನಮೃತಾ, ಮಹೇಶ್, ಡಾ. ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net