

ಹಾಸನ: ಕರ್ತವ್ಯನಿರತ ಟ್ರೈನಿ ವೈದ್ಯೆ ಹತ್ಯೆಗೆ ತುರ್ತು ನ್ಯಾಯ ದೊರೆಯಬೇಕು ಹಾಗೂ ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷಿತಾ ಕ್ರಮಗಳನ್ನು ಖಾತ್ರಿಗೊಳಿಸಬೇಕೆಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ನಗರದ ತಣ್ಣೀರುಹಳ್ಳದ ಬಳಿ ಇರುವ ಎಸ್‌ಡಿಎಂ ಕಾಲೇಜು ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್‌ಆರ್ ವೃತ್ತ, ಬಿಎಂ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ತಲುಪಿತು. ಇದೆ ವೇಳೆ ವೈದ್ಯಕೀಯ ವಿದ್ಯಾರ್ಥಿಗಳ ಡೀನ್ ಡಾ. ಗಾಯತ್ರಿ ಭಟ್ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ತವ್ಯನಿರತ ವೈದ್ಯರ ಮೇಲೆ ವಿನಾಃಕಾರಣ ದೌರ್ಜನ್ಯ ಮಾಡಲಾಗುತ್ತಿದೆ. ಇದರಿಂದ ಮಾನಸಿಕವಾಗಿ ತುಂಬಾ ನೊಂದಿದ್ದೇವೆ ಎಂದು ಬೇಸರ ಹೊರಹಾಕಿದರು.
ಇತ್ತೀಚೆಗೆ ಕೋಲ್ಕತದಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆ ಮೇಲೆ ನಡೆದ ಕ್ರೂರ ಅತ್ಯಾಚಾರ ಮತ್ತು ಹತ್ಯೆಯನ್ನು ಈ ಮೂಲಕ ತೀವ್ರವಾಗಿ ಖಂಡಿಸುತ್ತೇವೆ. ಈ ಭೀಕರ ಹಿಂಸಾಚಾರ ಇಡೀ ದೇಶ ಮತ್ತು ವಿಶ್ವವನ್ನು ಬೆಚ್ಚಿ ಬೀಳಿಸಿದೆ. ಹಾಗೆಯೇ ವೈದ್ಯ ವೃತ್ತಿಯಲ್ಲಿ ತೊಡಗುವ ಮೂಲಕ, ಇತರರ ಸೇವೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿರುವ ವೈದ್ಯರು ಭಯದ ಸ್ಥಿತಿಯಲ್ಲಿ ಕೆಲಸ ಮಾಡಬೇಕಾಗಿದೆ. ಬೇರೊಬ್ಬರ ಜೀವವನ್ನು ಉಳಿಸುವ ವೈದ್ಯೆಯ ಭೀಕರ ಕೊಲೆ ಅದು ಆಕೆಯ ಕುಟುಂಬದ ದುರಂತವಲ್ಲ. ಬದಲಾಗಿ ಈ ಸಮಾಜದ ದುರಂತ. ಇತರರ ಜೀವವನ್ನು ಉಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಮೇಲೆ ನಡೆಸುವ ಇಂತಹ ಹಿಂಸಾತ್ಮಕ, ಘೋರ ಕೃತ್ಯವನ್ನು ಸಹಿಸಲಾಗದು ಎಂದರು.
ಈ ಘೋರ ಅಪರಾಧದಲ್ಲಿ ತಪ್ಪಿತಸ್ಥರನ್ನು ನ್ಯಾಯಾಂಗಕ್ಕೆ ಒಪ್ಪಿಸಲು ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳು ತುರ್ತು ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು. ಈ ಪ್ರಕರಣ ಕುರಿತು ಸಂಪೂರ್ಣ ಮತ್ತು ಪಾರದರ್ಶಕ ತನಿಖೆ ನಡೆಸಿ, ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ವೈದ್ಯಕೀಯ ವೃತ್ತಿಪರರ ಸುರಕ್ಷತೆಯ ಬಗ್ಗೆ ಸಮುದಾಯಕ್ಕೆ ಭರವಸೆ ಮೂಡಿಸಬೇಕು. ಸಮಾಜದ ಸ್ವಾಸ್ಥ್ಯಕ್ಕೆ ಕೆಲಸ ಮಾಡುತ್ತಿರುವ ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಘನತೆಯನ್ನು ಗೌರವಿಸುವ ಮತ್ತು ಸುರಕ್ಷಿತ ಭಾವನೆ ಮೂಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಎಂ ಕಾಲೇಜು ಮತ್ತು ಆಸ್ಪತ್ರೆಯ ಡಾ. ಪ್ರಸನ್ನ, ಡಾ. ಅಶೋಕ್ ಲಮಾಣಿ, ಡಾ. ಯಶಸ್, ಡಾ. ಅಮರ್, ಹರ್ಷಿತ್ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.