ವೈದ್ಯಾಧಿಕಾರಿ ವಿರುದ್ಧ ಚವ್ಹಾಣ್ ಗರಂ

IMG-20230607-WA0028
Published on

ಔರಾದ್: ಶಾಸಕ ಪ್ರಭು.ಬಿ ಚವ್ಹಾಣ್ ಅವರು ಔರಾದ್ ಕ್ಷೇತ್ರದ ದಾಬಕಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.
ಎಲ್ಲ ವಾಡ್೯ಗಳಲ್ಲಿ ಸಂಚರಿಸಿ ರೋಗಿಗಳ ಹಾಸಿಗೆ, ಚಿಕಿತ್ಸೆ ಕೋಣೆ ಸೇರಿ ಆಸ್ಪತ್ರೆಯ ಎಲ್ಲ ವ್ಯವಸ್ಥೆಗಳನ್ನು ವೀಕ್ಷಿಸಿದರು. ಔಷಧ ಕೋಣೆಗೆ ತೆರಳಿ ಔಷಧ ಲಭ್ಯತೆ ಮತ್ತು ವಿತರಣೆಯ ಬಗ್ಗೆ ವೈದ್ಯಾಧಿಕಾರಿಯಿಂದ ವಿವರಣೆ ಪಡೆದರು.
ಅವಶ್ಯಕತೆಗೆ ಅನುಗುಣ ಔಷಧ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಸಮರ್ಪಕವಾಗಿ ವಿತರಿಸಬೇಕು. ಅವ ಮೀರಿದ ಔಷಧ ಇಟ್ಟುಕೊಳ್ಳುವುದು, ವಿತರಣೆಗೆ ರೋಗಿಗಳನ್ನು ಸತಾಯಿಸುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸಿಬ್ಬಂದಿ ಹಾಜರಾತಿ ಪರಿಶೀಲಿಸಿ, ಬಯೋಮೆಟ್ರಿಕ್ ಯಂತ್ರದ ಮೂಲಕ ಹಾಜರಾತಿ ಪಡೆದರೂ ಕೆಲ ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಹಾಜರಾತಿ ದಾಖಲಿಸಿ ಮನೆಗೆ ಹೋಗುತ್ತಿದ್ದಾರೆ ಎಂಬ ಆರೋಪಗಳಿವೆ. ಇಂತಹ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಡಿಎಚ್ಒ ಅವರಿಗೆ ತಿಳಿಸಿದರು.
ಗ್ರಾಮೀಣ ಭಾಗದ ಜನತೆಗೆ ಸುಲಭವಾಗಿ ಆರೋಗ್ಯ ಸೇವೆ ಸಿಗಬೇಕೆಂಬ ಉದ್ದೇಶದಿಂದ ಪರಿಶ್ರಮ ವಹಿಸಿ ಗ್ರಾಮದಲ್ಲಿ ಒಳ್ಳೆ ಆಸ್ಪತ್ರೆ ನಿರ್ಮಿಸಲಾಗಿದೆ. ವೈದ್ಯರು ಸರಿಯಾಗಿ ಕೆಲಸ ಮಾಡುವ ಮೂಲಕ ಆಸ್ಪತ್ರೆ ಸದುಪಯೋಗ ಆಗುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯಲ್ಲಿನ ಆಂಬ್ಯುಲೆನ್ಸ್ ಹಾಗೂ ಮತ್ತೀತರ ಉಪಕರಣಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಸಾರ್ವಜನಿಕರಿಂದ ಕುಂದುಕೊರತೆ ಆಲಿಸಿದ ಶಾಸಕರು, ರಾತ್ರಿ ವೇಳೆ ವೈದ್ಯರು ಇರುತಿಲ್ಲ ಎಂದು ಸಾರ್ವಜನಿಕರು ಪ್ರಸ್ತಾಪಿಸುತಿದ್ದಂತೆ ವೈದ್ಯಾಧಿಕಾರಿ ವಿರುದ್ಧ ಕೆಂಡಾಮಂಡಲರಾದ ಶಾಸಕರು, ವೈದ್ಯಕೀಯ ಸಿಬ್ಬಂದಿ ಹಾಜರಾತಿ ಕುರಿತಂತೆ ಜನರಿಂದ ನಿರಂತರ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಜನರಿಗೆ ಸ್ಪಂದಿಸದ ವೈದ್ಯರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ವೈದ್ಯರು ಮತ್ತು ಸಿಬ್ಬಂದಿ ದಿನದ 24 ಗಂಟೆಯೂ ಆಸ್ಪತ್ರೆಯಲ್ಲಿ ಲಭ್ಯವಿರಬೇಕು. ರಾತ್ರಿ ವೇಳೆ ಹೆರಿಗೆ ಪ್ರಕರಣ ಹೆಚ್ಚಾಗಿ ಕಾಣಿಸುತ್ತವೆ. ಇಂಥ ವೇಳೆ ವೈದ್ಯರು ಇಲ್ಲದಿದ್ದರೆ ಜನ ಸಾಕಷ್ಟು ತಾಪತ್ರಯ ಎದುರಿಸಬೇಕಾಗುತ್ತದೆ. ಇನ್ನು ಮುಂದೆ ಇದು ನಡೆಯಬಾರದು. ಸರ್ಕಾರಿ ಆಸ್ಪತ್ರೆಗಳು ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ರೈತರು, ಕೂಲಿ ಕಾರ್ಮಿಕರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗೆ ಬರುವುದರಿಂದ ಎಲ್ಲರಿಗೂ ಉತ್ತಮ ಸೇವೆ ಸಿಗಬೇಕು. ಸಿಬ್ಬಂದಿ ಕೊರತೆಯಿರುವ ಆಸ್ಪತ್ರೆಗಳಿಗೆ ಶೀಘ್ರ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ವೈದ್ಯಾಕಾರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ, ಮುಖಂಡರಾದ ಸತೀಷ ಪಾಟೀಲ್, ದೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net