ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ

IMG-20250128-WA0004
Published on

ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಟಿ.ಕಿರಣ್ ಅವರು ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಮನವಿ ಸಲ್ಲಿಸಿದರು.

ತಾಲೂಕಿನ ಹರದನಹಳ್ಳಿ ಗ್ರಾಮದ ನಿವಾಸಿ ಸುಬ್ರಹ್ಮಣ್ಯ ಹೊಟ್ಟೆನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಡಿ.20 ರಂದು ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಟಿ.ಕಿರಣ್ ಅವರು ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡದೆ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದರು.

ಈ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ವಿಳಂಬ ತೋರಿ, ಒಂದು ಬಾರಿ ಸ್ಕ್ಯಾನಿಂಗ್ ಮಾಡಿಸಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಡೀನ್ ಗಮನಕ್ಕೆ ತಂದಾಗ, ಬಳಿಕ ಸ್ಕ್ಯಾನಿಂಗ್ ಮಾಡಿಸಿ ವರದಿಯಲ್ಲಿ ಮೂತ್ರ ಸೊಂಕಿನ ಸಮಸ್ಯೆಯಾಗಿದೆ ಎಂದು ತದನಂತರ ಹೇಳಿದ್ದರು. ಸರಿಯಾಗಿ ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದರೆ, ರೋಗಿಯ ಹರಿಣಿ ಬ್ಲ್ಯಾಸ್ಟ್ ಆಗುವುದನ್ನು ತಡೆದು ಸಣ್ಣ ಕರಳನ್ನು ಉಳಿಸಬಹುದಿತ್ತು. ವೈದ್ಯರ ಬೇಜವಾಬ್ದಾರಿಯಿಂದ ರೋಗಿ ಮರಣ ಹೊಂದಿದ್ದಾರೆ ಎಂದು ಆರೋಪಿಸಿ, ಡಾ.ಟಿ.ಕಿರಣ್ ಅವರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸಿಮ್ಸ್ ಡೀನ್ ಡಾ.ಮಂಜುನಾಥ್ ಅವರಿಗೆ ದೂರನ್ನು ನೀಡಲಾಗಿತ್ತು.

ಈ ಸಂಬಂಧ ಜ.27 ರಂದು ಡೀನ್ ಸಮ್ಮುಖದಲ್ಲಿ ರೋಗಿಯ ಸಂಬಂಧಿಕರು ವಿಚಾರಣೆಗೆ ಹಾಜರಾಗಿದ್ದರು. ಆದರೆ ಡಾ.ಟಿ.ಕಿರಣ್ ಅವರು ವಿಚಾರಣೆಗೆ ಗೈರಾಗಿದ್ದರು. ಈ ಮೂಲಕ ಡಾ.ಟಿ.ಕಿರಣ್ ಅವರು ರೋಗಿಗೆ ಚಿಕಿತ್ಸೆ ನೀಡಲು ಬೇಜವಾಬ್ದಾರಿ ತೋರಿರುವುದು ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ಡಾ. ಟಿ. ಕಿರಣ್ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಿಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ವಿಚಾರಣೆಯ ತಂಡದ ಮೂಲಕ ಮತ್ತೆ ದೂರು ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net