

ಬೆಳಗಾವಿ: ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಸುದ್ದಿ ಪ್ರಕಟವಾಗುತ್ತಿದ್ದು, ತಮಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಮಹಾಮಂಡಳಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕಳೆದ ಒಂದೂವರೆ ವರ್ಷದಿಂದ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲ ಮಾಧ್ಯಮಗಳಲ್ಲಿ ಲಸಿಕಾಕರಣ ವ್ಯವಸ್ಥೆ ಬಗ್ಗೆ ಅನವಶ್ಯಕ ಸುದ್ದಿ ಪ್ರಕಟವಾಗುತ್ತಿರುವುದರಿಂದ ಕಾರ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ. ಮಾನಸಿಕ ವಾಗಿಯೂ ಹಿಂಸೆಯಾಗುತ್ತಿದೆ. ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ಹಾಗಾಗಿ ತಮಗೆ ರಕ್ಷಣೆ ನೀಡಬೇಕು. ನಿರಾತಂಕವಾಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಡಾ.ಸಂಜಯ ಡುಮ್ಮಗೋಳ, ಮಹಾಮಂಡಳಿ ಜಿಲ್ಲಾಧ್ಯಕ್ಷ ಡಾ.ಶಿವಾನಂದ ಮಾಸ್ತಿಹೋಳಿ, ಲಗಮಣ್ಣ ಪಂಗಣ್ಣವರ, ವಸಂತ ಪಾತಳಿ, ಕಲೀಮ್ ಮುಲ್ಲಾ ಇತರರಿದ್ದರು.