

ಗದಗ: ನಗರದ ಜಿಲ್ಲಾಡಳಿತ ಭವನದಲ್ಲಿ ಕರೊನಾ ವೈರಸ್ ಶಂಕಿತ ಪ್ರಕರಣಗಳ ಪರೀಕ್ಷೆ ಹಾಗೂ ವೈದ್ಯಕೀಯ ಚಿಕಿತ್ಸೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಸುರಕ್ಷತೆಗಾಗಿ ಡಾ. ಸಂಕನೂರ ಆಸ್ಪತ್ರೆಯಿಂದ ತಯಾರಿಸಲಾದ ಮಾಸ್ಕ್ ಶೀಲ್ಡ್ಗಳನ್ನು ಶನಿವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ ಸದಸ್ಯ ಎಸ್.ವಿ. ಸಂಕನೂರ, ಡಾ. ಸಂಕನೂರ ಆಸ್ಪತ್ರೆಯಿಂದ ಮಾಸ್ಕ್ ಶೀಲ್ಡ್ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಡಾ. ಪ್ರಕಾಶ ಸಂಕನೂರ, ಅಧೀಕ್ಷಕ ವಿನ್ಸೆಂಟ್ ಮಾರ್ಗದರ್ಶನದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಾಸ್ಕ್ಗಳನ್ನು ತಯಾರಿಸಿದ್ದಾರೆ. 1000 ಮಾಸ್ಕ್ಗಳನ್ನು ವಿತರಿಸುವ ಗುರಿ ಇದ್ದು, ಸದ್ಯ 600 ಮಾಸ್ಕ್ಗಳನ್ನು ಈಗ ವಿತರಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರೀಗಿಡದ, ಜಿಮ್್ಸ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ ಮತ್ತಿತರರು ಇದ್ದರು.
50 ಸಾವಿರ ರೂ. ದೇಣಿಗೆ
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಕರೊನಾ ವೈರಸ್ ತಡೆ ಕುರಿತಂತೆ ತಮ್ಮ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿ ಅವರ ಕೋವಿಡ್ 19 ಪರಿಹಾರ ನಿಧಿಗೆ ಹಾಗೂ ಪ್ರಧಾನಮಂತ್ರಿ ಅವರ ಕೋವಿಡ್ 19 ರಾಷ್ಟ್ರೀಯ ಪರಿಹಾರ ನಿಧಿಗೆ 50,000 ರೂ. ಚೆಕ್ ಅನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ನೀಡಿದರು.