ವೈದ್ಯರ ಸೇವೆ ಗುರುತಿಸುವುದು ಹೆಮ್ಮೆಯ ವಿಷಯ

18
Published on

ಮೈಸೂರು: ಸೇವಾ ಮನೋಭಾವದಿಂದ ಸಮಾಜದ ಆರೋಗ್ಯ ಕಾಪಾಡುವ ಧ್ಯೇಯವನ್ನಿಟ್ಟುಕೊಂಡು ಹಗಲಿರುಳೆನ್ನದೆ ಶ್ರಮಿಸುವ ವೈದ್ಯರನ್ನು ಗುರುತಿಸಿ ಗೌರವಿಸಿದಾಗ ತುಂಬ ಹೆಮ್ಮೆ ಎನಿಸುತ್ತದೆ ಎಂದು ಹಿರಿಯ ವೈದ್ಯ ಡಾ.ಪ್ರಹ್ಲಾದರಾವ್ ಹೇಳಿದರು.
ನಗರದ ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಿಂದ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ವೈದ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಭಾರತ ಕಂಡ ಮಹಾನ್ ವೈದ್ಯ ಪ್ರಾಮಾಣಿಕ ರಾಜಕಾರಣಿ ಅಪ್ರತಿಮ ದೇಶ ಸೇವಕ ಡಾ.ಬಿ.ಸಿ.ರಾಯ್ ಅವರು ವೈದ್ಯರ ಸೇವೆಗೆ ಒಂದು ಘನತೆ ತಂದುಕೊಟ್ಟರು. ಅಲ್ಲದೆ, ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗೆ ಕಾರಣಕರ್ತರಾಗಿದ್ದರು ಎಂದು ಬಣ್ಣಿಸಿದರು.
ರೋಗಿಗಳು ವೈದ್ಯರನ್ನು ದೇವರೆಂಬ ಭಾವನೆ ಇಟ್ಟು ಚಿಕಿತ್ಸೆ ಪಡೆಯಲು ಬರುತ್ತಾರೆ. ವೈದ್ಯರು ತಾಳ್ಮೆಯಿಂದ ಚಿಕಿತ್ಸೆ ನೀಡಿ ಗುಣಮುಖರಾಗಿಸುವುದು ಅವರ ಕರ್ತವ್ಯ. ನಂಬಿಕೆ ಎಂಬುದು ಮುಖ್ಯವಾಗಿರುತ್ತದೆ ಎಂದರು.
ನಗರಪಾಲಿಕ ಸದಸ್ಯ ರಮೇಶ್(ರಮಣಿ) ಮಾತನಾಡಿ, ವೈದ್ಯರ ಸೇವೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ವೈದ್ಯಕೀಯ ವೃತ್ತಿ ಪವಿತ್ರವಾಗಿದ್ದು, ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಾಣದ ಹಂಗು ತೊರೆದು ನೀಡಿದ ಸೇವೆ ಸ್ಮರಣಿಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಪ್ರಹ್ಲಾದ್‌ರಾವ್, ಡಾ.ರಾಧಾ, ಡಾ. ಸುಜಾತಾರಾವ್, ಡಾ.ಪ್ರಶಾಂತ್, ಡಾ.ಪವನ್ ಕುಮಾರ್, ಡಾ.ಸಂದೀಪ್, ಡಾ.ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು. ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಂಘಟಕರಾದ ರಶ್ಮಿ, ಮಮತಾ, ಶಾರದಾ, ಪವಿತ್ರಾ, ವೈಷ್ಣವಿ, ಪೂಜಾ, ಚಂದ್ರು, ಉಮಾ, ಗಣಪತಿ, ಸತ್ಯ ,ರಘು, ಆನಂದ್, ಪವನ್, ಹರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net