

ಬಳ್ಳಾರಿ : ಗರ್ಭಿಣಿಯರು ವೈದ್ಯರ ಸಲಹೆ ಇಲ್ಲದೆ ಅನಗತ್ಯವಾಗಿ ಸ್ಕಾೃನಿಂಗ್ ಮಾಡಿಸಬೇಡಿ ಎಂದು ಡಿಎಚ್‌ಒ ಡಾ. ವೈ. ರಮೇಶ್‌ಬಾಬು ಸಲಹೆ ನೀಡಿದರು.
ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಯುತ್ತಿರುವ ಹಿನ್ನಲೆ ಖುದ್ದು ಗರ್ಭಿಣಿಯರ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ನಂತರವೇ ಮದುವೆ ಮಾಡಬೇಕು. ಗರ್ಭಿಣಿಯಂದು ಗೊತ್ತಾದ ಕೂಡಲೇ ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಿ, ತಾಯಿ ಕಾರ್ಡ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೆ ಅನಗತ್ಯವಾಗಿ ಸ್ಕಾೃನಿಂಗ್ ಮಾಡಿಸಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹೆರಿಗೆಗೆ ಆದ್ಯತೆ ನೀಡಬೇಕು ಎಂದರು. ಪ್ರಸ್ತುತ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಮತ್ತು ಸಿಬ್ಬಂದಿಯಿಂದ ಉಚಿತ ಹೆರಿಗೆ ಸೇವೆ ನೀಡಲಾಗುತ್ತಿದೆ. ಜೊತೆಗೆ ಮಗುವನ್ನು ಬೆಚ್ಚಗಿನ ವಾತಾವರಣ ಕಲ್ಪಿಸಲು ಆಸ್ಪತ್ರೆಗಳಲ್ಲಿ ಬೇಬಿ ವಾರ್ಮರ್ ಸೌಲಭ್ಯ ಸಹಿತ ಇದ್ದು, ಮಗುವಿನ ಅಗತ್ಯ ಕಾಳಜಿ ವಹಿಸಲಾಗುತ್ತಿದೆ. ಗರ್ಭೀಣಿಯರು ಪ್ರತಿದಿನ ಸ್ಥಳೀಯವಾಗಿ ದೊರಕುವ ತರಕಾರಿ, ಹಸಿರು ತಪ್ಪಲು ಪಲ್ಯ, ಬೇಳೆಕಾಳು, ಮೊಳಕೆ ಕಾಳು, ಹಾಗೂ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆ ಸೇವಿಸಬೇಕು. ತಾಯಿಯ ಆರೋಗ್ಯದ ಪರೀಕ್ಷೆಗಳನ್ನು ಕೈಗೊಂಡಾಗ ಕಂಡುಬರುವ ಆರೋಗ್ಯದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಪಡೆಯಬೇಕು ಎಂದರು.