

ಮದ್ದೂರು: ತಾಲೂಕಿನ ವೈದ್ಯನಾಥಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀವೈದ್ಯನಾಥೇಶ್ವರಸ್ವಾಮಿ ದೇಗುಲದಲ್ಲಿ ಮಹಾ ರಥೋತ್ಸವ ಫೆ.15 ರಂದು ಬೆಳಗ್ಗೆ 10.45 ರಿಂದ 11.30 ರೊಳಗೆ ನಡೆಯಲಿದೆ.
ರಥೋತ್ಸವದ ಅಂಗವಾಗಿ ಫೆ.14 ರಂದು ಮಧ್ಯಾಹ್ನ 3.30 ಗಂಟೆಗೆ ವೈದ್ಯನಾಥಪುರ ಗ್ರಾಮಸ್ಥರಿಂದ ಹೊಳೆ ಆಂಜನೇಯಸ್ವಾಮಿ ಸನ್ನಿಧಿಯಿಂದ ಮೀಸಲು ನೀರು ತರುವ ಜತೆಗೆ ಹಳೇ ಬೂದನೂರು ಶ್ರೀಅಂಕನಾಥೇಶ್ವರಸ್ವಾಮಿ ವೀರಗಾಸೆಯನ್ನು ಏರ್ಪಡಿಸಲಾಗಿದೆ.
ಫೆ.15 ರಂದು ಬೆಳಗ್ಗೆ 10.45ಕ್ಕೆ ಶ್ರೀವೈದ್ಯನಾಥೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ. ರಾತ್ರಿ 8 ಗಂಟೆಗೆ ಶ್ರೀಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರಸ್ವಾಮಿಯವರ ಬಸವಪ್ಪ ಜತೆಗೆ, ಮದ್ದೂರಿನ ಶ್ರೀಮದ್ದೂರಮ್ಮ, ಆಲೂರಿನ ಶ್ರೀಆಲೂರಮ್ಮ, ಉಪ್ಪಿನಕೆರೆ ಗ್ರಾಮದ ಶ್ರೀಪಟ್ಟಲದಮ್ಮ, ಹಳೇ ಬೂದನೂರು ಗ್ರಾಮದ ಶ್ರೀಅಂಕನಾಥೇಶ್ವರಸ್ವಾಮಿ ವೀರಗಾಸೆ, ಪೂಜಾ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ.
ರಥೋತ್ಸವದ ಅಂಗವಾಗಿ ಚನ್ನಪಟ್ಟಣ ತಾಲೂಕು ವಿರುಪಾಕ್ಷಿಪುರ ಹೋಬಳಿ ಜೆ.ಬ್ಯಾಡರಹಳ್ಳಿಯ ಶ್ರೀವೈದ್ಯನಾಥೇಶ್ವರ ಸಮಿತಿ ಹಾಗೂ ಗ್ರಾಮಸ್ಥರಿಂದ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಆಯೋಜನೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಮದ್ದೂರಿನಿಂದ ವೈದ್ಯನಾಥಫುರಕ್ಕೆ ಹೋಗಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.