ದಾವಣಗೆರೆ: ಹೊನ್ನಾಳಿ ತಾಲೂಕು ಸುಂಕದಕಟ್ಟೆಯ ಬಡ ಪ್ರತಿಭಾನ್ವಿತ ವಿದ್ಯಾರ್ಥಿ ಕೆ.ಸಿ. ದರ್ಶನ್ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ದಾನಿಗಳು, ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡುವಂತೆ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಯೋಗೇಶ್ ಕೋರಿ ಕುಳಗಟ್ಟೆ ಆಗ್ರಹಿಸಿದ್ದಾರೆ.
ದರ್ಶನ್, ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 493 ಅಂಕ ಪಡೆದು ಮಂಗಳೂರಿನ ಜೆ.ಆರ್. ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ವೈದ್ಯಕೀಯ ಸೀಟು ಗಿಟ್ಟಿಸಿಕೊಂಡಿದ್ದು, ತರಗತಿಗೆ ದಾಖಲಾಗಿದ್ದಾನೆ. ವಾಹನ ಚಾಲಕರಾದ ತಂದೆ ಚಂದ್ರಪ್ಪ ಹಾಗೂ ಅಡುಗೆ ಸಹಾಯಕಿಯಾಗಿ ದುಡಿಯುತ್ತಿರುವ ನಾಗರತ್ನಮ್ಮ ಅವರಿಗೆ ಹಣ ಭರಿಸುವ ಶಕ್ತಿ ಇಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಹಾಸ್ಟೆಲ್, ಪರೀಕ್ಷಾ ಶುಲ್ಕ, ದಾಖಲಾತಿ ಶುಲ್ಕ ಸೇರಿ ಒಂದು ವರ್ಷಕ್ಕೆ 4.50 ಲಕ್ಷ ರೂ. ಹೊಂದಿಸಬೇಕಿದೆ. ಇದೀಗ ಕೆಲವರಿದಂದ ಪಡೆದ 1.44 ಲಕ್ಷ ರೂ. ಕಟ್ಟಿ ತರಗತಿಗೆ ದಾಖಲಾಗಿದ್ದಾನೆ. ಮುಂದಿನ ನಾಲ್ಕು ವರ್ಷಗಳ ಅವಧಿಗೆ 21.60 ಲಕ್ಷ ರೂ. ಅಗತ್ಯವಿದೆ. ದಾನಿಗಳು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ನ್ಯಾಮತಿ ರಸ್ತೆ, ಹೊನ್ನಾಳಿ, ಬ್ಯಾಂಕ್ ಖಾತೆ ಸಂಖ್ಯೆ: 41192813103 , ಐಎಫ್‌ಎಸ್‌ಸಿ ಕೋಡ್: ಎಸ್‌ಬಿಐಎನ್ 0040308 ಇಲ್ಲಿಗೆ ಧನಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿ ದರ್ಶನ್ ಮಾತನಾಡಿ, ವೈದ್ಯನಾಗಿ ಸೇವೆ ಸಲ್ಲಿಸಬೇಕೆಂಬ ಕನಸಿದೆ. ವೈದ್ಯಕೀಯ ಸೀಟು ಸಿಕ್ಕಿದ್ದರೂ ಓದು ಮುಗಿಸಲು ಆರ್ಥಿಕ ತೊಂದರೆ ಇದೆ ಎಂದು ಅಳಲು ತೋಡಿಕೊಂಡರು. ಗೋಷ್ಠಿಯಲ್ಲಿ ಮೃತ್ಯುಂಜಯಪ್ಪ, ಕಾಂತಕುಮಾರ್, ವಿದ್ಯಾರ್ಥಿ ಪಾಲಕರಾದ ಚಂದ್ರಪ್ಪ, ನಾಗರತ್ನಮ್ಮ ಇದ್ದರು.
--