

ಹಾಸನ: ವೈದ್ಯಕೀಯ ವಿಜ್ಞಾನಕ್ಕೆ ಅಂಗರಚನಾಶಾಸ್ತ್ರಜ್ಞರ ಕೊಡುಗೆ ಅಪಾರ ಎಂದು ಕರ್ನಾಟಕ ಚಾಪ್ಟರ್ ಆಫ್ ಅಸೋಸಿಯೇಷನ್‌ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಪ್ರಥಮ ಕುಲಸಚಿವ ಡಾ.ಕಾಂತಾ.ಎಸ್ ಜಾದವ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಹಿಮ್ಸ್ ಆಸ್ಪತ್ರೆ ಕಾಲೇಜು ಆವರಣದಲ್ಲಿರುವ ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಅಂಗರಚನಾ ಶಾಸ್ತ್ರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಂಗರಚನಾ ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂಶೋಧಕರು ಇಂದಿಗೂ ಕೂಡ ಅನೇಕ ಸಂಶೋಧನೆಗಳನ್ನು ನಡೆಸಿ, ಹೊಸ ವಿಷಯಗಳನ್ನು ವ್ಯೆದ್ಯಕೀಯ ರಂಗಕ್ಕೆ ಪರಿಚಯಿಸುತ್ತಿದ್ದಾರೆ ಎಂದರು.
ಇಂತಹ ಸಮ್ಮೇಳನವು ಸರ್ಕಾರಿ ಸಂಸ್ಥೆ ಹಿಮ್ಸ್‌ನಲ್ಲಿ ಆಯೋಜನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು, ಅನೇಕ ವಿಷಯಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ ಎಂದರು.
ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಮಾತಾನಾಡಿ, ಈ ಸಮ್ಮೇಳನ ಇತರ ವಿಭಾಗಗಳಿಗೆ ಮಾದರಿಯಾಗಿದ್ದು, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದರೆ ಸಂಶೋಧನೆಗಳ ಗುಣಮಟ್ಟ ಹೆಚ್ಚುತ್ತದೆ ಎಂದರು.
ಸಂಸ್ಥೆ ಪ್ರಾಂಶುಪಾಲ ಡಾ.ಕೆ.ಎ.ನಾಗೇಶ್, ವ್ಯೆದ್ಯಕೀಯ ಅಧೀಕ್ಷಕ ಡಾ.ವಿ.ಆರ್.ಕೃಷ್ಣಮೂರ್ತಿ, ಕೆ.ಸಿ.ಎ.ಆಯೋಜನಾ ಕಾರ್ಯದರ್ಶಿ ಡಾ.ಬಿ.ಎಸ್.ಪ್ರಕಾಶ್ ಇತರರು ಇದ್ದರು.