

ಮಳವಳ್ಳಿ: ಮನೆ ಪಾಠಕ್ಕೆಂದು ತೆರಳಿ ಕೊಲೆಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಜತೆಗೆ ಬಂಧನಕ್ಕೆ ಒಳಗಾಗಿರುವ ಆರೋಪಿಯೇ ಪೈಶಾಚಿಕ ಕೃತ್ಯವೆಸಗಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ಟ್ಯೂಷನ್ ಸೆಂಟರ್ ಮಾಲೀಕ ಕಾಂತರಾಜು(50)ಆರೋಪಿ. ಈತ ಪಟ್ಟಣದಲ್ಲಿ ಅ.11ರಂದು 10 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿ, ಶವವನ್ನು ನಿರ್ಮಾಣ ಹಂತದಲ್ಲಿದ್ದ ಮನೆಯ ನೀರಿನ ಸಂಪ್‌ನೊಳಗೆ ಹಾಕಿದ್ದನು. ಇತ್ತ ಮನೆಗೆ ಬಾರದ ಬಾಲಕಿಗಾಗಿ ಪಾಲಕರು ಹುಡುಕಾಟ ನಡೆಸಿದ್ದಾಗ ಆರೋಪಿ ಕಾಂತರಾಜು ಕೂಡ ಅವರೊಂದಿಗೆ ಸೇರಿ ಹುಡುಕುವ ನಾಟಕವಾಡಿದ್ದನು. ಶವ ಪತ್ತೆಯಾದ ಬಳಿಕ ಕಾಂತರಾಜು ಮೇಲೆ ಅನುಮಾನ ಬಂದು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಈತ ನಡೆಸಿದ ಘೋರ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದ.
ಘಟನೆ ದಿನದಂದು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಆರೋಪಿ ಬಂಧನದ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿರಿಸಿದ್ದರು. ಬುಧವಾರ ರಾತ್ರಿ ಬಾಲಕಿಯ ಅಂತ್ಯಕ್ರಿಯೆ ನೆರವೇರಿಸಿದ ನಂತರ ಗುರುವಾರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರು. ಮೊದಲಿಗೆ ಪಾಲಕರು ನೀಡಿದ್ದ ದೂರು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 302 ಪ್ರಕರಣ ದಾಖಲಿಸಿಕೊಂಡಿದ್ದರು.
ಗುರುವಾರ ಬಂದ ವೈದ್ಯಕೀಯ ವರದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 302 ಜತೆಗೆ 201, 376(ಎ), 376(ಎಬಿ), ಕಲಂ 5(ಐ) 5(ಎಂ) 4 ಮತ್ತು 6 ಹಾಗೂ ಪೋಕ್ಸೋ-2012 ಅಡಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮತ್ತೆ ಪೊಲೀಸರ ವಶಕ್ಕೆ ಪಡೆಯಲಾಗಿದೆ.
ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸರ ವಶಕ್ಕೆ ಪಡೆಯಲಾಗಿದೆ.
ಎಸ್.ಯತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ