

ಮೈಸೂರು
ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸೇರಿದ ಪುರುಷರ ಹಾಸ್ಟೆಲ್‌ಗೆ ಸೋಮವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಿಥಿಲಗೊಂಡ ಕಟ್ಟಡ ಹಾಗೂ ಕೊಠಡಿಗಳನ್ನು ವೀಕ್ಷಣೆ ಮಾಡಿದರು.
ಹಾಸ್ಟೆಲ್‌ನ ಕೊಠಡಿಯೊಂದರ ಛಾವಣಿಯ ಗಾರೆ ಕೆಲದಿನಗಳ ಹಿಂದೆ ಇದ್ದಕ್ಕಿದ್ದಂತೆ ಕಳಚಿ ಬಿದ್ದಿತ್ತು. ಗಾರೆ ಬೀಳುತ್ತಿದ್ದಂತೆ ಎಚ್ಚೆತ್ತ ವಿದ್ಯಾರ್ಥಿಗಳು ತಕ್ಷಣ ಹೊರಗೋಡಿ ಬಂದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. ನಂತರ ಇಡೀ ಗಾರೆ ಕುಸಿದು ಬಿದ್ದಿತ್ತು. ಕಾಲೇಜಿನಲ್ಲಿ ಕಳಚಿರುವ ಗಾರೆಯ ಅವಶೇಷಗಳ ಚಿತ್ರಗಳನ್ನು ವಿದ್ಯಾರ್ಥಿಗಳು ಟ್ವಿಟರ್‌ನಲ್ಲಿ ಹಾಕಿ ಸಚಿವ ಡಾ.ಸುಧಾಕರ ಅವರ ಗಮನ ಸೆಳೆದಿದ್ದರು. ಅಲ್ಲದೆ, ಈ ಫೋಟೋಗಳು ವೈರಲ್ ಆಗಿವೆ. ಹಲವು ಟ್ವೀಟಿಗರು ಕೂಡಲೇ ದುರಸ್ತಿಗೊಳಿಸಲು ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ಈ ಸಂಬಂಧ ಶೀಘ್ರದಲ್ಲಿ ಸಚಿವ ಡಾ.ಸುಧಾಕರ್ ಅವರೊಂದಿಗೆ ಚರ್ಚೆ ಮಾಡಲಾಗುವುದು. ಜತೆಗೆ ದುರಸ್ತಿಗೆ ಬೇಕಾಗಿರುವ ಅನುದಾನವನ್ನು ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು.
ಹಾಸ್ಟೆಲ್ ಕಟ್ಟಡ ದುರಸ್ತಿಗೆ 7.50 ಕೋಟಿ ರೂ. ಅಂದಾಜಿಸಲಾಗಿತ್ತು. ಈಗ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಅಂದಾಜು ವೆಚ್ಚಕ್ಕಿಂತ ಶೇ.15ರಷ್ಟು ವೆಚ್ಚ ಹೆಚ್ಚಾಗಬಹುದು. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದೇಶದಲ್ಲೇ 2ನೇ ಅತಿದೊಡ್ಡ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ ಅನುದಾನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಹೆಚ್ಚುವರಿ 18 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ ಪಡೆಯಲು ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಇಡುವ ತೀರ್ಮಾನಕ್ಕೆ ಬರಲಾಗಿದೆ ಎಂದರು.