ವೈದ್ಯಕೀಯ ತಂಡಕ್ಕೆ ಕ್ಲೀನ್​ಚಿಟ್

10KWR-Geeta Banavali
Published on

ಕಾರವಾರ: ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯ ನಂತರ ಗೀತಾ ಬಾನಾವಳಿ ಎಂಬ ಬಾಣಂತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಜಿಪಂ ಸಿಇಒ ಎಂ.ರೋಶನ್ ನೇತೃತ್ವದ ತಂಡ ಡಾ. ಶಿವಾನಂದ ಕುಡ್ತಲಕರ್ ಹಾಗೂ ಅವರ ವೈದ್ಯಕೀಯ ಸಹವರ್ತಿಗಳಿಗೆ ಕ್ಲೀನ್ ಚಿಟ್ ನೀಡಿದೆ.

ಗೀತಾ ಬಾನಾವಳಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಯಲ್ಲಿ ಲೋಪವಾಗಿಲ್ಲ. ಅರಿವಳಿಕೆ ಚುಚ್ಚುಮದ್ದು ನೀಡುವಲ್ಲಿ ಲೋಪವಾಗಿಲ್ಲ ಎಂದು ತನಿಖಾ ತಂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೆರಿಗೆಯ ನಂತರ ಹೃದಘಾತವಾಗುವ ಸಾಧ್ಯತೆ ಇರುತ್ತದೆ. ಗೀತಾ ಬಾನಾವಳಿ ಸಾವಿಗೆ ಅಂಥ ವೈದ್ಯಕೀಯ ಕಾರಣಗಳು ಇರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಭಾರತೀಯ ವೈದ್ಯಕೀಯ ಮಂಡಳಿಯ ಮಾರ್ಗಸೂಚಿಯಂತೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯ ವೇಳೆ ಅರಿವಳಿಕೆ ಚಚ್ಚುಮದ್ದನ್ನು ಅರಿವಳಿಕೆ ತಜ್ಞರೇ ನೀಡಬೇಕೆಂದಿಲ್ಲ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಅರಿವಳಿಕೆ ತಜ್ಞರು ಇದ್ದರೆ ಒಳ್ಳೆಯದು. ಒಂದು ಶಸ್ತ್ರ ಚಿಕಿತ್ಸೆ ನಡೆದ ಸಂದರ್ಭದ ಆಗು ಹೋಗುಗಳಿಗೆ ಸಂಬಂಧಪಟ್ಟ ಇಡೀ ತಂಡ ಹೊಣೆಗಾರನಾಗಿರುತ್ತದೆ. ಅದಕ್ಕೆ ಯಾವುದೇ ಒಬ್ಬರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಹೆಚ್ಚುವರಿ ಐದಾರು ಸಲಹೆಗಳನ್ನು ನೀಡಲಾಗಿದೆ.

ಹಿನ್ನೆಲೆ: ಕೋಡಿಬಾಗ ಸವೋದಯನಗರದ ಗೀತಾ ಶಿವನಾಥ ಬಾನಾವಳಿ ಎಂಬ ಮಹಿಳೆ ಆಗಸ್ಟ್ 31 ರಂದು ತಮ್ಮ ಎರಡನೇ ಮಗುವಿಗೆ ಕಾರವಾರ ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಸೆ.3 ರಂದು ಅವರಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದರೆ, ಶಸ್ತ್ರ ಚಿಕಿತ್ಸೆಯ ನಂತರ ಗೀತಾ ಮೃತಪಟ್ಟಿದ್ದರು. ಗೀತಾ ಸಾವಿಗೆ ಸ್ತ್ರೀ ರೋಗ ತಜ್ಞ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಕುಡ್ತಲಕರ್​ನಿರ್ಲಕ್ಷ್ಯ ಕಾರಣ ಎಂದು ಮೀನುಗಾರ ಸಮುದಾಯದವರು ಹಾಗೂ ಮೃತಳ ಪತಿ ಆರೋಪಿಸಿದ್ದರು. ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದರು. ಶಹರ ಠಾಣೆಯಲ್ಲಿ ಡಾ.ಕುಡ್ತಲಕರ್ ವಿರುದ್ಧ ದೂರು ನೀಡಿದ್ದರು. ಘಟನೆಯ ನಂತರ ಜಿಪಂ ಸಿಇಒ, ಡಿಎಚ್​ಒ ಹಾಗೂ ಖಾಸಗಿ ವೈದ್ಯರ ನೇತೃತ್ವದ ತನಿಖಾ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಸಮಿತಿ ವೈದ್ಯ ಹಾಗೂ ವೈದ್ಯಕೀಯ ಸಿಬ್ಬಂದಿ ಹೇಳಿಕೆ ಪಡೆದು ಅಕ್ಟೋಬರ್ ತಿಂಗಳಲ್ಲಿ ವರದಿ ನೀಡಿದೆ.

ಹೋರಾಟದಲ್ಲಿ ಕುಡ್ತಲಕರ್ : ಶಾಸಕಿ ರೂಪಾಲಿ ನಾಯ್ಕ ಅವರ ಮನವಿಯಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶಾನುಸಾರ ಡಾ. ಕುಡ್ತಲಕರ್ ಅವರನ್ನು ಸೆ. 30ರಂದು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರಿಗೆ ಬೇರೆ ಸ್ಥಾನ ತೋರಿಸಿಲ್ಲ ಮತ್ತು ಜಿಲ್ಲಾ ಸರ್ಜನ್ ಸ್ಥಾನಕ್ಕೆ ಡಾ. ವೆಂಕಟೇಶ ಅವರನ್ನು ನೇಮಿಸಿ ಆದೇಶಿಸಲಾಗಿದೆ. ತಮ್ಮ ವರ್ಗಾವಣೆ ಪ್ರಶ್ನಿಸಿ ಕುಡ್ತಲಕರ್ ನ್ಯಾಯಾಂಗ ಹೋರಾಟ ನಡೆಸಿದ್ದಾರೆ. ಡಾ.ಕುಡ್ತಲಕರ್ ವಿರುದ್ಧ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ನಡೆದಿದೆ.

ಆಸ್ಪತ್ರೆ ಬಿಟ್ಟ ಹರ್ಷಿತಾ ಜಾಧವ್ : ಗೀತಾ ಬಾನಾವಳಿಗೆ ತಾನೇ ಅರಿವಳಿಕೆ ಚುಚ್ಚುಮದ್ದು ನೀಡಿದ್ದಾಗಿ ತನಿಖೆ ತಂಡದ ಮುಂದೆ ಒಪ್ಪಿಕೊಳ್ಳುವಂತೆ ಶಸ್ತ್ರ ಚಿಕಿತ್ಸೆಯ ವೇಳೆ ಉಪಸ್ಥಿತರಿದ್ದ ತಂತ್ರಜ್ಞೆ ಹರ್ಷಿತಾ ಜಾಧವಗೆ ಡಾ. ಶಿವಾನಂದ ಕುಡ್ತಲಕರ್ ಹಾಗೂ ಇತರರು ಒತ್ತಡ ಹೇರಿದ್ದರು ಎಂಬ ದೂರು ಕೇಳಿ ಬಂದಿತ್ತು. ಈ ಸಂಬಂಧ ರಕ್ಷಣೆ ನೀಡುವಂತೆ ಹರ್ಷಿತಾ ಡಿಸಿ, ಸಿಇಒಗೆ ಮನವಿ ಸಲ್ಲಿಸಿದ್ದರು. ನಂತರ ಆಸ್ಪತ್ರೆಯನ್ನೂ ಬಿಟ್ಟು ಹೋಗಿದ್ದರು.

ಗೀತಾ ಬಾನಾವಳಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಒ ಎಂ.ರೋಶನ್ ನೇತೃತ್ವದ ಸಮಿತಿ ನಡೆಸಿದ ತನಿಖಾ ವರದಿ ಕೈ ಸೇರಿದೆ. ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು. | ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net