

ಮೈಸೂರು: ಇತ್ತೀಚಿನ ಕೆಲ ವರ್ಷಗಳಲ್ಲಿ ಅನೇಕ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿವೆ. ವೈದ್ಯಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪಡೆಯಲು ಜ್ಞಾನದೊಂದಿಗೆ ಕೌಶಲವೂ ಅಗತ್ಯ ಎಂದು ಕರ್ನಾಟಕ ರಾಜ್ಯ ಔಷಧ ಪರಿಷತ್‌ನ ಕಾರ್ಯಕಾರಣಿ ಸದಸ್ಯ ವೀರ ನಾರಾಯಣಗೌಡ ಹೇಳಿದರು.
ಶಾರದಾ ವಿಲಾಸ ಔಷಧ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ವೈದ್ಯಕೀಯ ಕ್ಷೇತ್ರವು ವೃತ್ತಿಪರವಾದ ಮತ್ತು ಪ್ರಾಯೋಗಿಕ ಕ್ಷೇತ್ರವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯಕೀಯ ವಿಷಯಗಳಲ್ಲಿ ವೃತ್ತಿಪರ ಕೌಶಲ ರೂಢಿಸಿಕೊಳ್ಳಬೇಕು. ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಜ್ಞಾನ ಪಡೆದುಕೊಳ್ಳಬೇಕು ಎಂದರು.
ವೈದ್ಯಕೀಯ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಕೌಶಲಾಧಾರಿತ ಜ್ಞಾನ ಗಳಿಸಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಪದವಿ ಗಳಿಸಲು ಮಾತ್ರ ಅಧ್ಯಯನ ಮಾಡಬಾರದು. ಅದರಾಚೆಯೂ ಸಮಾಜ, ವೈದ್ಯಕೀಯ ಕ್ಷೇತ್ರ ಪ್ರಗತಿಗೂ ನೆರವಾಗಬೇಕು ಎಂದು ಹೇಳಿದರು.
ವೈದ್ಯಕೀಯ ವಿಜ್ಞಾನ ಮತ್ತು ಯಾವುದೇ ಕ್ಷೇತ್ರದಲ್ಲಿ ಜ್ಞಾನ ಸಂಪಾದನೆ ಮಾಡದಿದ್ದರೆ ಆತ್ಮವಿಶ್ವಾಸ ಬರಲ್ಲ. ಆಸಕ್ತಿಯೂ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಪ್ರಶ್ನೆಗಳು ಮತ್ತು ಗೊಂದಲಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಇದು ನಿರಂತರವಾದ ಪರಿಶ್ರಮದಿಂದ ಸಾಧ್ಯವಾಗಲಿದೆ ಎಂದರು.
ಕರ್ನಾಟಕ ರಾಜ್ಯ ಔಷಧ ಪರಿಷತ್‌ನ ಉಪಾಧ್ಯಕ್ಷ ಡಿ.ಎ.ಗುಂಡೂರಾವ್, ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ದಿನೇಶ್, ಶಾರದಾ ವಿಲಾಸ ಔಷಧ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ, ಡಾ. ಜಿನೇಸ್ ಬಿ. ನಾಗವಿ ಇದ್ದರು.