ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ

h11-Niramay 2
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಗೋಕುಲ ರಸ್ತೆಯ ಕೆಎಸ್​ಆರ್​ಟಿಸಿ ಡಿಪೋ ಸರ್ಕಲ್ ಬಳಿ ನಿರಾಮಯ ಮೆಡಿಕಲ್ ಸೆಂಟರ್ ಹಾಗೂ ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್-ಹೈಟೆಕ್ ಡೈಗ್ನಾಸ್ಟಿಕ್ ಮತ್ತು ಎಂಆರ್​ಐ ಸ್ಕ್ಯಾನ್ ಸೆಂಟರ್ ಅನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.

ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಉದ್ಘಾಟಿಸಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಈಗ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಆಗುತ್ತಿದೆ. ಮೊದಲೆಲ್ಲ ಗುಣಮಟ್ಟದ ಚಿಕಿತ್ಸೆ ಪಡೆಯಲು ಬೆಂಗಳೂರಿನಂಥ ಮಹಾನಗರಗಳಿಗೆ ತೆರಳಬೇಕಿತ್ತು. ಈಗ ಹುಬ್ಬಳ್ಳಿಯಲ್ಲಿಯೇ ತಜ್ಞ ವೈದ್ಯರು ಇದ್ದಾರೆ. ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳಿವೆ. ಆರ್ಥಿಕವಾಗಿ ಹಿಂದುಳಿದವರಿಗೆ ಇಲ್ಲಿ ಆರೋಗ್ಯ ಭಾಗ್ಯ ಲಭಿಸುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಬಡವರಿಂದ ದೇಶ ನಡೆಯುತ್ತಿದೆ. ದೇಶಕ್ಕೆ ಅವರ ಕೊಡುಗೆ ದೊಡ್ಡದಿದೆ. ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೆ ಬಳಕೆ ಮಾಡಬೇಕು. ಬಡವರಿಗೆ ನೀಡಿದ್ದು ನಿಮಗೆ ಕಾಯಂ ಹೆಸರು ತರಲಿದೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ತಜ್ಞ ವೈದ್ಯರು ಹುಬ್ಬಳ್ಳಿಯಲ್ಲಿ ಇದ್ದಾರೆ. ಅವರಿಂದ ಚಿಕಿತ್ಸೆ ಪಡೆದವರು ನಗುತ್ತಾ ಮನೆಗೆ ಹೋಗಬೇಕು. ಆ ರೀತಿ ವೈದ್ಯರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತವು ಬ್ರಿಟನ್ ಹಿಂದಿಕ್ಕಿ ಆರ್ಥಿಕತೆಯಲ್ಲಿ ಐದನೇ ಸ್ಥಾನ ಪಡೆದಿದೆ. 2047ನೇ ಇಸ್ವಿಯಲ್ಲಿ ಭಾರತ ನಂ. 1 ಸ್ಥಾನ ಗಿಟ್ಟಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪದಿಂದ ವಿಶ್ವದಲ್ಲಿ ಭಾರತ ಮಿಂಚುತ್ತಿದೆ. ಹಾಗಾಗಿಯೇ ತಜ್ಞರು ಎಂದುಕೊಳ್ಳುವ ನಾವೆಲ್ಲ ಇದರ ಭಾಗಿದಾರರಾಗಬೇಕು ಎಂದು ಕರೆ ನೀಡಿದರು.

ಮೇಯರ್ ಈರೇಶ ಅಂಚಟಗೇರಿ, ಮಾಜಿ ಶಾಸಕ ಅಶೋಕ ಕಾಟವೆ, ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್ ಚೇರ್ಮನ್ ಡಾ. ಸಂಜೀವ ಕಳಸೂರು, ಡಾ. ದತ್ತಾ ನಾಡಗೇರ, ಡಾ. ಬಿ.ಅರ್. ಪಾಟೀಲ, ಡಾ.ಎಸ್.ಪಿ. ಬಳಿಗಾರ, ಡಾ. ರಶ್ಮಿ ನಾಡಗೇರ, ಡಾ.ಜಿ.ಬಿ. ಸತ್ತೂರ, ಇತರರು ಇದ್ದರು. ಡಾ. ವಿವೇಕ ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net