

ಬೆಳಗಾವಿ: ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಪಾತ್ರ ವಹಿಸಿರುವ ಔಷಧಗಳ ಗುಣಮಟ್ಟದಲ್ಲಿ ನಂಬಿಕೆ ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ವೈದ್ಯರ ಮೇಲಿದೆ ಎಂದು ಗುಜರಾತಿನ ಮ್ಯಾಂಟೇಜ್ ಲ್ಯಾಬೋರೇಟರೀಸ್ ನಿರ್ದೇಶಕ ಡಾ.ಶ್ರೇನಿಕ್ ಷಾ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಶುಕ್ರವಾರ ಕೆಎಲ್‌ಇ ಕಾಲೇಜ್ ಆ್ ಫಾರ್ಮಸಿ, ಅಮೇರಿಕನ್ ಅಸೋಸಿಯೇಷನ್ ಆ್ ಇಂಡಿಯನ್ ಫಾರ್ಮಾಸ್ಯುಟಿಕಲ್ ಸೈಂಟಿಸ್ಟ್ (ಎಎಐಪಿಎಸ್) ಹಾಗೂ ಅನುಸಂಧಾನ ನ್ಯಾಷನಲ್ ರಿಸರ್ಚ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಜ್ಞಾನ ವಿನಿಮಯ ಮತ್ತು ನಾವೀನ್ಯತೆ ಉತ್ತೇಜಿಸಲು ಔಷಧಾಲಯ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞರನ್ನು ಒಟ್ಟುಗೂಡಿಸುವ ಕೊಲೊಕ್ವಿಯಂ ಎರಡು ದಿನಗಳ ಸಮ್ಮೇಳನ ಭಾಗವಹಿಸಿ ಅವರು ಮಾತನಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಲ್ಲಿ ಸ್ವಯಂ ಶಿಸ್ತು ಇರಲೇಬೇಕು. ಅನಾರೋಗ್ಯ, ಆರೋಗ್ಯ ಪರಿಕಲ್ಪನೆ ಮತ್ತು ಆರೋಗ್ಯ ವ್ಯವಸ್ಥೆಯ ಅಗತ್ಯ ಪೂರೈಸುವಲ್ಲಿ ಫಾರ್ಮಾಸ್ಯುಟಿಕಲ್ ಭವಿಷ್ಯದಲ್ಲಿ ದೊಡ್ಡ ಪಾತ್ರ ನಿರ್ವಹಿಸಲಿದೆ ಎಂದು ಪ್ರೇರಣೆ ನೀಡಿದರು.\
ಎಎಐಪಿಎಸ್ ಸಂಸ್ಥಾಪಕ ಸದಸ್ಯ ಮುಕುಂದ್ ಮೈಕ್ ಯೆಲ್ವಿಗಿ ಮಾತನಾಡಿ, ಭಾರತದಲ್ಲಿ ಫಾರ್ಮಸಿ ಪಠ್ಯಕ್ರಮವನ್ನು ಸಮನ್ವಯಗೊಳಿಸುವಲ್ಲಿ ಮತ್ತು ಜಾಗತಿಕ ವೇದಿಕೆಗೆ ಭಾರತೀಯ ಫಾರ್ಮಾಸಿಸ್ಟ್‌ಗಳನ್ನು ಸಿದ್ಧಪಡಿಸುವಲ್ಲಿ ಸಮ್ಮೇಳನಗಳ ಪಾತ್ರ ದೊಡ್ಡದಿದೆ ಎಂದರು.
ಐಸಿಎಂಆರ್ ನಿರ್ದೇಶಕ ಡಾ. ಸುಬರ್ಣಾ ರಾಯ ಮಾತನಾಡಿ, ಆರೋಗ್ಯ ಕ್ಷೇತ್ರದ ಪ್ರಸ್ತುತ ಸನ್ನಿವೇಶ ಮತ್ತು ರೋಗ ನಿರ್ವಹಣೆಯಲ್ಲಿ ಸಮಗ್ರ ಔಷಧದ ಅಗತ್ಯತೆತೆ ಹೆಚ್ಚಿದೆ. ಆರೋಗ್ಯ ರಕ್ಷಣೆಯ ಅಭ್ಯಾಸ ಸುಧಾರಿಸಲು ಔಷಧಗಳಲ್ಲಿ ನಾವೀನ್ಯತೆಯ ಮಹತ್ವ ತಿಳಿಸುವುದು ಅವಶ್ಯಕತೆಯಿದೆ ಎಂದರು.
ಕಾರ್ಯಾಗಾರದಲ್ಲಿ 24 ಸಂಸ್ಥೆಗಳಿಂದ 450 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಏಳು ಉಪನ್ಯಾಸಗಳು ಮತ್ತು ಮೌಖಿಕ ಪ್ರಸ್ತುತಿಗಳು, ಬೀದಿ ನಾಟಕಗಳು, ಕಿರುಚಿತ್ರ ತಯಾರಿಕೆ, ಮನ್ ಕಿ ಬಾತ್ ಮತ್ತು ಸಂವಾದಾತ್ಮಕ ಚರ್ಚೆಯಂತಹ ಚಟುವಟಿಕೆಗಳು ನಡೆದವು.
ಡಾ. ನಿತಿನ್ ಗಂಗನೆ, ಡಾ. ಎಂ.ಎಸ್. ಗಣಾಚಾರಿ, ಡಾ. ಸುನೀಲ್ ಜಲಾಲಪುರೆ, ಡಾ. ಎಂ.ಬಿ. ಪಾಟೀಲ, ಡಾ. ವಿ.ಎಸ್.ಮಾಸ್ತಿಹೊಳಿಮಠ, ಡಾ. ಡಾ.ವಿ.ಎಸ್.ಮಣ್ಣೂರ ಇತರರಿದ್ದರು.