

ಕೋಲಾರ: ಜಿಲ್ಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವುದರ ಜತೆಗೆ ಇಎಸ್‌ಐ ಆಸ್ಪತ್ರೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳುವಂತೆ ಮಾಡಬೇಕು ಎಂದು ರೈತ ಸಂಘದಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ನಗರದ ಹೊರವಲಯದ ಡಿಎಚ್‌ಒ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭ ಮನವಿ ನೀಡಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಇಡೀ ದೇಶಕ್ಕೆ ಹಾಲು, ಹಣ್ಣು ತರಕಾರಿ, ರೇಷ್ಮೆ, ಚಿನ್ನ ನೀಡಿದಂತಹ ಜಿಲ್ಲೆಯಲ್ಲಿ ಬಡ ರೈತ, ಕೂಲಿಕಾರ್ಮಿಕರು ಹೆಚ್ಚಾಗಿದ್ದು, ಸರ್ಕಾರಿ ವೈದಕೀಯ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದರಿಂದ ಎಲ್ಲವರ್ಗದವರಿಗೂ ಅನುಕೂಲವಾಗಲಿದೆ. ಮಕ್ಕಳಲ್ಲಿ ವೈದ್ಯರಾಗುವ ಹಂಬಲ ಹೆಚ್ಚಾಗಲಿದೆ. ಜಿಲ್ಲೆಯ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ. ಹೀಗಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಒಂದು ಸಿಟಿ ಸ್ಕಾö್ಯನಿಂಗ್ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು. ಕೋಲಾರ, ಮಾಲೂರು, ನರಸಾಪುರ, ವೇಮಗಲ್‌ನಲ್ಲಿನ ಕೈಗಾರಿಕೆಗಳಲ್ಲಿ ಸಹಸ್ರಾರು ಮಂದಿ ಕಾರ್ಮಿಕರು ಇದ್ದು, ಆರೋಗ್ಯ ಸೇವೆಗಳಿಗೆ ಬೆಂಗಳೂರನ್ನು ಅವಲಂಭಿಸಬೇಕಿದೆ. ಇದರಿಂದಾಗಿ ಕಾರ್ಮಿಕರಿಗೆ ಹೋಗಿ ಬರುವ ಖರ್ಚು ಮತ್ತು ಸಮಯದ ಅಭಾವ ಕಾಡುತ್ತಿದೆ. ಈ ದೃಷ್ಟಿಯಿಂದ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗಲು ಕೂಡಲೇ ಇಎಸ್‌ಐ ಆಸ್ಪೆತ್ರೆ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಯಿಂದ ಕೂಡಿದ್ದು, ಖಾಸಗಿ ಆಸ್ಪತ್ರೆಗಳು ದುಬಾರಿ ಹಣ ವಸೂಲಿ ಮಾಡುತ್ತಿವೆ. ನೂರಾರು ನಕಲಿ ವೈದ್ಯರು ನಾಯಿ ಕೊಡೆಗಳಂತೆ ಕ್ಲೀನಿಕ್‌ಗಳನ್ನು ತೆರೆದು ಜನರ ಆರೋಗ್ಯದ ಜತೆ ಚಲ್ಲಾಟವಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಪ್ರಬಲ ಕಾನೂನು ಜಾರಿಮಾಡಬೇಕೆಂದು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ನರ್ಸಗಳು ಎಎನ್‌ಎಂಗಳ ಹುದ್ದೆಗಳನ್ನು ಭರ್ತಿ ಮಾಡಿ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ ೨೪ ಗಂಟೆ ವೈದ್ಯರು ಕೆಲಸ ನಿರ್ವಹಿಸುವಂತೆ ಆದೇಶ ಮಾಡಬೇಕು. ೧೦೮ ಆ್ಯಂಬುಲೆನ್ಸ್ ಅವ್ಯವಸ್ಥೆಯಾಗಿದ್ದು, ಕರೆ ಮಾಡಿದರೆ ೫ ತಾಸು ನಂತರ ರೋಗಿಯ ಪ್ರಾಣ ಹೋದ ಮೇಲೆ ಬರುತ್ತದೆ. ಆ ಅವ್ಯವಸ್ಥೆಯನ್ನು ಸರಿಪಡಿಸಲು ಪ್ರತಿ ತಾಲೂಕಿನಲ್ಲಿ ೪ರಂತೆ ೨೪ ಆ್ಯಂಬುಲೆನ್ಸ್ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳನಿಗೌಡ, ಮುಖಂಡರಾದ ಯಾರಂಘಟ್ಟ ಗಿರೀಶ್, ಪುತ್ತೇರಿ ರಾಜು, ಮಂಗಸಂದ್ರ ತಿಮ್ಮಣ್ಣ, ಚಂದ್ರಪ್ಪ ಮುಂತಾದವರು ಇದ್ದರು.