ವೈದ್ಯಕೀಯ ಕಾಲೇಜಿನ ಸೀಟುಗಳೆಲ್ಲಾ ಭರ್ತಿ

HYR SUDHAKAR
Published on

ಚಿತ್ರದುರ್ಗ: ಕೋಟೆನಗರಿಯ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆರಂಭಕ್ಕೆ ದಿನಗಣನೆ ಹತ್ತಿರವಾಗುತ್ತಿದ್ದು, ಪ್ರಸಕ್ತ ಸಾಲಿನ ನಿಗದಿತ 150 ಸೀಟುಗಳು ಭರ್ತಿಯಾಗಿವೆ…

ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದ ಮೂವರು ಸೇರಿ ಜಿಲ್ಲೆಯ 30 ಜನರಿಗೆ ಸೀಟುಗಳು ಲಭ್ಯವಾಗಿವೆ. ಶೇ 100ರಲ್ಲಿ ಕರ್ನಾಟಕಕ್ಕೆ 85, ಇತರೆ ರಾಜ್ಯದ ವಿದ್ಯಾರ್ಥಿಗಳಿಗೆ 15ರಷ್ಟು ಸೀಟುಗಳು ಹಂಚಿಕೆಯಾಗಿವೆ ಎಂದು ಸಂಸ್ಥೆಯ ವಿಶೇಷಾಧಿಕಾರಿ ಡಾ.ಯುವರಾಜ್ ಮಾಹಿತಿ ನೀಡಿದರು.

ಗುಡ್ಡದ ರಂಗವ್ವನಹಳ್ಳಿಯಲ್ಲಿ ಇರುವ ದಾವಣಗೆರೆ ವಿವಿಯ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿ ಡಿಎಂಎಫ್ ಅನುದಾನದ 25ಕೋಟಿ ರೂ. ವೆಚ್ಚದಲ್ಲಿ ಕೆಆರ್‌ಐಡಿಎಲ್ ತಾತ್ಕಾಲಿಕ ಪ್ರಯೋಗಾಲಯ ಸಿದ್ಧವಾಗಿದ್ದು, ಒಂದೆರಡು ದಿನಗಳಲ್ಲಿ ಹಸ್ತಾಂತರವಾಗಲಿದೆ ಎಂದು ತಿಳಿಸಿದರು.

ಅ. 5ರಂದು ಹೊಸ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ತರಗತಿಗಳು ನಡೆಯಲಿವೆ. ವಿವಿಧ ವೈದ್ಯಕೀಯ ಕಾಲೇಜುಗಳಿಂದ ತಾತ್ಕಾಲಿಕವಾಗಿ 11 ಮಂದಿ ಪ್ರೊಫೆಸರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರವೇಶ ಪಡೆದವರಲ್ಲಿ 147 ಮಂದಿ ವಿದ್ಯಾರ್ಥಿನಿಲಯದ ಸೌಲಭ್ಯ ಕೇಳಿದ್ದಾರೆ. ಅಗತ್ಯ ಸೌಕರ್ಯ ಕಲ್ಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ವಿದ್ಯಾರ್ಥಿನಿಯರ ಸುರಕ್ಷತೆ ಅತ್ಯಗತ್ಯವಾಗಿದ್ದು, ಇದಕ್ಕೆ ಮೊದಲ ಆದ್ಯತೆ ನೀಡಬೇಕು. ಜಿಲ್ಲೆಗೆ ಒಲಿದ ವೈದ್ಯಕೀಯ ಕಾಲೇಜು ಖ್ಯಾತಿ ಗಳಿಸಬೇಕು. ಯಾವ ಕಾರಣಕ್ಕೂ ಕೆಟ್ಟ ಹೆಸರು ಬರಬಾರದು. ಆ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚಿಸಿದರು. ಇದಕ್ಕೆ ಎಂಎಲ್ಸಿ ಕೆ.ಎಸ್.ನವೀನ್ ಕೂಡ ಕೈಜೋಡಿಸಿದರು.

ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಜಿಲ್ಲಾಡಳಿತ ಎಲ್ಲ ರೀತಿಯಲ್ಲೂ ಅಗತ್ಯ ಸಹಕಾರ ನೀಡಿದೆ. ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯಕ್ಕೆ ಹಾಸ್ಟೆಲ್‌ಗಳನ್ನು ಕೂಡ ಗುರುತಿಸಿದ್ದೇವೆ. ಅದು ಸರಿಯಿಲ್ಲ, ಇದು ಚೆನ್ನಾಗಿಲ್ಲ ಎಂಬ ವಾದ ಬೇಡ. ನಿಮಗೆ ಒಪ್ಪಿಗೆಯಾಗದಿದ್ದರೆ, ನಿಮ್ಮ ಇಲಾಖೆ ಅಥವಾ ಸಂಸ್ಥೆಯ ನೆರವು ಪಡೆದು ಸೌಕರ್ಯ ಕಲ್ಪಿಸಿಕೊಳ್ಳಿ. ಇನ್ನೇನು ವಿದ್ಯಾರ್ಥಿಗಳು ಜಿಲ್ಲೆಗೆ ಬರಲಿದ್ದು, ಅಗತ್ಯ ಪೀಠೋಪಕರಣಗಳು ಇರಬೇಕು. ನೆಲದ ಮೇಲೆ ಮಲಗಬೇಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವೈದ್ಯಕೀಯ ಕಾಲೇಜಿಗೆ ಅಂದಾಜು 500 ಕೋಟಿ ರೂ. ವೆಚ್ಚವಾಗಲಿದ್ದು, ವಿವಿಧ ಕಾಮಗಾರಿಗಳ ಆರಂಭಿಸಲು 200 ಕೋಟಿ ರೂ.ಗೆ ಮಂಜೂರಾತಿ ನೀಡಿದ್ದು, ಟೆಂಡರ್ ಹಂತದಲ್ಲಿದೆ. 180 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಅಭಿವೃದ್ಧಿಗಾಗಿ 101 ಕೋಟಿ ರೂ. ಕೆಇಎಂಆರ್‌ಸಿ ಅನುದಾನದಡಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಡಿಎಂಎಫ್ ಅನುದಾನ ನೀಡುವಂತಿಲ್ಲ: ವೈದ್ಯಕೀಯ ಕಾಲೇಜು ಚಿತ್ರದುರ್ಗದಲ್ಲಿ ಆರಂಭವಾಗಲಿ ಎಂಬ ಉದ್ದೇಶದಿಂದ ಡಿಎಂಎಫ್ ಅನುದಾನದಡಿ 25 ಕೋಟಿ ನೀಡಲಾಗಿದೆ. ಪ್ರತಿ ಬಾರಿಯೂ ಈ ಅನುದಾನದ ಮೇಲೆ ಅವಲಂಬನೆ ಆಗಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದಲೇ ಅನುದಾನ ತರಬೇಕು ಎಂದು ಶಾಸಕರಾದ ಎಂ.ಚಂದ್ರಪ್ಪ, ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಎಂಎಲ್ಸಿ ಕೆ.ಎಸ್.ನವೀನ್ ಸಭೆಯಲ್ಲಿ ಒತ್ತಾಯಿಸಿದರು. ಇದೊಂದಕ್ಕೆ ಅನುದಾನ ನೀಡುತ್ತ ಹೋದರೆ, ಬೇರೆ ಅಭಿವೃದ್ಧಿ ಕಾರ್ಯಗಳಾಗುವುದಿಲ್ಲ. ಇನ್ನು ಮುಂದೆ ಯಾವ ಕಾರಣಕ್ಕೂ ನೀಡಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಡಿಎಚ್‌ಒ ಡಾ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net