

ಚಿತ್ರದುರ್ಗ: ವೈದ್ಯ ಬೋಧಕರ ನೇಮಕಾತಿ ಸಂಬಂಧ ಹುದ್ದೆಗನುಸಾರ ಹೆಚ್ಚುವರಿ ಲಂಚದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್, ನಿರ್ದೇಶಕ ಡಾ.ಬಿ.ವೈ. ಯುವರಾಜ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಆಗ್ರಹಿಸಿ ರಾಜ್ಯ ಮಾದಿಗ ಯುವಸೇನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತ ತನಿಖೆಗೆ ಆದೇಶಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ನೇಮಕಾತಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ ಎಂಬ ಸಾಕಷ್ಟು ದೂರುಗಳು ಕೇಳಿಬಂದಿವೆ. ಬೆಂಗಳೂರಿನಲ್ಲಿ ಸಂದರ್ಶನ ನಡೆಸಿರುವುದು, ಎರಡು ದಿನ ಮುಂಚಿತವಾಗಿ ಮುಂದೂಡಿರುವುದು, ಅಧಿಸೂಚನೆ ಬದಲು ಮರು ಅಧಿಸೂಚನೆಯಲ್ಲಿ ರೋಸ್ಟರ್ ಅನ್ನು ಬದಲಾಯಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ತನಿಖೆಗೆ ಕ್ರಮವಹಿಸಬೇಕು ಎಂದು ಕೋರಿದರು.
ಯುವಸೇನೆಯ ರಾಜಣ್ಣ, ಓಬಳಮ್ಮ, ತಿಪ್ಪೇಸ್ವಾಮಿ, ಸಂತೋಷ್, ಸಿದ್ಧಪ್ಪ, ರುದ್ರಮುನಿ, ವೆಂಕಟೇಶ್, ಶಿವಕುಮಾರ್, ನಾಗಭೂಷಣ್, ಇತರರಿದ್ದರು.