

ಚಿತ್ರದುರ್ಗ: ಇಲ್ಲಿನ ವೈದ್ಯಕೀಯ ಕಾಲೇಜಿಗೆ 500 ಕೋಟಿ ರೂ. ಅನುದಾನ ಸಿಎಂ ಮೀಸಲಿಟ್ಟಿದ್ದಾರೆಂದು ಬಜೆಟ್ ಮಂಡನೆ ಬಳಿಕ ಜಿಲ್ಲೆಯ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆ ಸುಳ್ಳು ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಆಯವ್ಯಯದಲ್ಲೇ ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು 500 ಕೋಟಿ ರೂ. ಮೀಸಲಿಟ್ಟು, ವೈದ್ಯಕೀಯ ಕಾಲೇಜಿನ ಕಟ್ಟಡ ಆರಂಭಿಸಲು ಒಪ್ಪಿಗೆ ಸೂಚಿಸಿದ್ದರು. ಸ್ಥಳೀಯ ಡಿಎಂಎಫ್ ಅನುದಾನದಲ್ಲೇ 25 ಕೋಟಿ ರೂ. ಬಿಡುಗಡೆ ಕೂಡ ಮಾಡಲಾಗಿತ್ತು ಎಂದರು.
ವೈದ್ಯಕೀಯ ಕಾಲೇಜು ಆರಂಭವಾಗಿ 150 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದಷ್ಟೇ ಸಿದ್ದರಾಮಯ್ಯ ಹೇಳಿದ್ದಾರೆ. ಯಾವ ಸರ್ಕಾರ ಅಧಿಕಾರಕ್ಕೆ ಬಂದರು ನಮ್ಮ ಅವಧಿಯಲ್ಲಿ ಪ್ರಗತಿಯಾಗಿದೆ ಎಂದೇಳುವುದು ಸಾಮಾನ್ಯ. ಆದರೆ, ಜನರ ದಿಕ್ಕು ತಪ್ಪಿಸುವ ಹೇಳಿಕೆ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಮೀಸಲಿಟ್ಟಿದೆ. ಆದರೆ, ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಲ್ಲಿಸಬೇಕಾದ ನಿರ್ದಿಷ್ಟ ಬ್ಯಾಂಕ್ ಖಾತೆ, ಇನ್ನಿತರೆ ದಾಖಲೆ ಸಲ್ಲಿಸುತ್ತಿಲ್ಲ. ಮೊದಲು ಅದನ್ನು ಒದಗಿಸಲಿ ಎಂದರು.
100 ವರ್ಷದಲ್ಲಿ 75 ವರ್ಷ ಬರ ಕಂಡಿರುವ ಜಿಲ್ಲೆ ಚಿತ್ರದುರ್ಗ. ಈ ಯೋಜನೆ ಈ ಭಾಗಕ್ಕೆ ಅತ್ಯಂತ ಅನಿವಾರ್ಯವಾಗಿದೆ. ಸಿಎಂ ಅನುದಾನ ಬಿಡುಗಡೆಗೊಳಿಸಿ ವೇಗ ನೀಡುತ್ತಾರೆ ಎಂಬ ವಿಶ್ವಾಸ ಜನರಲ್ಲಿತ್ತು. ಆದರೆ, ನೀಡದಿರುವುದು ಭ್ರಮನಿರಸನ ಉಂಟಾಗಿದೆ. ನೀರಾವರಿ ಯೋಜನೆ ಕುರಿತು ನಿರ್ಲಕ್ಷಿಸುವುದು ಸರಿಯಲ್ಲ. ಮುಂದಾದರೂ ಪ್ರತ್ಯೇಕವಾಗಿ ಅನುದಾನ ನೀಡಿ ಅನುಷ್ಠಾನಕ್ಕೆ ಮುಂದಾಗಬೇಕು. ಇದಕ್ಕಾಗಿ ರೈತರ ಹೋರಾಟ ನಡೆಯುತ್ತಿದ್ದು, ನನ್ನ ಬೆಂಬಲವೂ ಇದೆ. ರಾಜ್ಯ ದಾಖಲೆ ಒದಗಿಸಿದ ನಂತರವೂ ಕೇಂದ್ರ ಬಿಡುಗಡೆಗೊಳಿಸದ ಸಂದರ್ಭ ಎದುರಾದರೆ, ಪಕ್ಷಾತೀತವಾಗಿ ನಿಯೋಗ ತೆರಳಲು ಸಿದ್ಧರಿದ್ದೇವೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.