

ಹಾಸನ: ಹಿಂದಿ ಭಾಷೆಯ ವಿರುದ್ಧದ ಹೋರಾಟದಲ್ಲಿ ಇಂಗ್ಲಿಷ್ ಭಾಷೆಯಿಂದ ದೇಶದ ಭಾಷೆಗಳಿಗೆ ಆಗುತ್ತಿರುವ ಹಾನಿಯ ಬಗ್ಗೆ ನಾವು ಎಚ್ಚರ ತಪ್ಪಬಾರದು. ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಕಡ್ಡಾಯ ಮಾಡಿ, ಕನ್ನಡ ಭಾಷೆ ಉಳಿವಿಗಾಗಿ ಗಂಭೀರವಾದ ಚಿಂತನೆ ಅಗತ್ಯವಿದೆ ಎಂದು ಸಾಮಾಜಿಕ ಹೋರಾಟಗಾರ ಆರ್.ಪಿ. ವೆಂಕಟೇಶ್ ಮೂರ್ತಿ ಎಚ್ಚರಿಸಿದರು.
ತಮಿಳುನಾಡು ಸರ್ಕಾರಕ್ಕೆ ತಾಕತ್ತಿದ್ದರೆ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ತಮಿಳು ಮಾಧ್ಯಮದಲ್ಲಿ ಕಲಿಸಲಿ ಎಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲವು ಅಂಶಗಳ ವಿರುದ್ಧ ಹಾಗೂ ತ್ರಿಭಾಷಾ ನೀತಿಯ ವಿರುದ್ಧ ಧ್ವನಿ ಎತ್ತಿರುವ ತಮಿಳುನಾಡು ಸರ್ಕಾರಕ್ಕೆ ಹಾಕಿರುವ ಈ ಸವಾಲನ್ನು ಎಲ್ಲ ಹಿಂದಿಯೇತರ ಭಾಷಿಕರೂ ಸ್ವೀಕರಿಸಲೇಬೇಕು. ದ್ವಿಭಾಷಾ ನೀತಿಯ ಪರವಾಗಿ ಕರ್ನಾಟಕದಲ್ಲಿ ಕೂಡ ಸಾಕಷ್ಟು ಚರ್ಚೆ ಆರಂಭವಾಗಿದ್ದು, ಹಿಂದಿಯ ವಿರುದ್ಧದ ಹೋರಾಟದಲ್ಲಿ ಇಂಗ್ಲಿಷ್ ಭಾಷೆಯಿಂದ ದೇಶದ ಭಾಷೆಗಳಿಗೆ ಆಗುತ್ತಿರುವ ಹಾನಿಯ ಬಗ್ಗೆ ನಾವು ಎಚ್ಚರ ತಪ್ಪಬಾರದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಕನಿಷ್ಠ ಪ್ರಾಥಮಿಕ ಶಿಕ್ಷಣವಾದರೂ ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಆಗಬೇಕೆಂದು ಎಷ್ಟೇ ಹೋರಾಟಗಳು ನಡೆದರೂ ಸಾಹಿತ್ಯ ಸಮ್ಮೇಳನಗಳಲ್ಲಿ ನಿರ್ಣಯಗಳು ಆಗುತ್ತಿದ್ದರೂ ಇಂಗ್ಲಿಷ್ ಮಾಧ್ಯಮದ ಪ್ರವಾಹದಲ್ಲಿ ದೇಶದ ಭಾಷೆಗಳು ಕೊಚ್ಚಿ ಹೋಗುತ್ತಿರುವುದನ್ನು ಕಂಡು ನಾವೆಲ್ಲ ಅಸಹಾಯಕರಾಗಿ ನೋಡುತ್ತಾ ನಿಲ್ಲುವ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತನ್ನ ಮಗುವನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವ ಒಬ್ಬನೇ ಒಬ್ಬ ಪೋಷಕ ಕೂಡ ಸಿಗಲಾರ. ಕನ್ನಡ ಮಾಧ್ಯಮದ ಪರವಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಮಾತ್ರವಲ್ಲದೆ, ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ, ಕಾನೂನು, ವಾಣಿಜ್ಯಶಾಸ್ತ್ರ ಹೀಗೆ ಬಹುತೇಕ ಎಲ್ಲ ಉನ್ನತ ವ್ಯಾಸಂಗ ವ್ಯವಸ್ಥೆ ಇಂಗ್ಲಿಷ್ ನಲ್ಲಿ ಇರುವುದರಿಂದ, ಸಹಜವಾಗಿ ಪೋಷಕರು ಭವಿಷ್ಯದಲ್ಲಿ ತಮ್ಮ ಮಕ್ಕಳು ಕಷ್ಟಕ್ಕೆ ಸಿಲುಕಬಾರದೆಂದು ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸುವ ನಿರ್ಧಾರಕ್ಕೆ ಬರುವುದು ತಪ್ಪೆಂದು ಹೇಳಲು ಸಾಧ್ಯವೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಇರಬೇಕೆಂದು ಹೇಳುವುದು ಕೇವಲ ಭಾವನಾತ್ಮಕ ಸಂಗತಿ ಆಗುತ್ತದೆಯೇ ಹೊರತು ವಾಸ್ತವಕ್ಕೆ ಹತ್ತಿರ ಅನಿಸುವುದಿಲ್ಲ. ಹಾಗಾಗಿ ಕನ್ನಡ ಸೇರಿದಂತೆ ದೇಶದ ಭಾಷೆಗಳು ಉಳಿಯಬೇಕಿದ್ದರೆ, ಉನ್ನತ ಶಿಕ್ಷಣ ದೇಶದ ಪ್ರಾದೇಶಿಕ ಭಾಷೆಗಳಲ್ಲಿ ಆಗಲೇಬೇಕು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಹೇಳಿಕೆಯನ್ನು ನಮ್ಮ ರಾಜ್ಯ ಸರ್ಕಾರ, ಕನ್ನಡಪರ ಹೋರಾಟಗಾರರು ಹಾಗೂ ಕನ್ನಡದ ಸಾಹಿತಿಗಳು ಸಕಾರಾತ್ಮಕವಾಗಿ ಸ್ವೀಕರಿಸಲೇಬೇಕು. ಉನ್ನತ ಶಿಕ್ಷಣವನ್ನು ದೇಶದ ಭಾಷೆಗಳಲ್ಲಿ ನೀಡಲು ಸಾಧ್ಯ ಇಲ್ಲ ಎನ್ನುವುದಾದರೆ, ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಇರಬೇಕೆಂದು ಭಾಷಣ ಮಾಡುವುದು ಹಾಗೂ ಸಮ್ಮೇಳನಗಳಲ್ಲಿ ಠರಾವು ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದರು.
ಸರ್ಕಾರ ನಡೆಸುವವರು ಮತ್ತು ಕನ್ನಡಪರ ಚಿಂತಕರು ಪ್ರಪಂಚದ ಎಲ್ಲ ದೇಶಗಳಲ್ಲಿ ಉನ್ನತ ಶಿಕ್ಷಣವು ಇಂಗ್ಲಿಷ್ ಮಾಧ್ಯಮದ ಮೂಲಕ ನಡೆಯುತ್ತಿದೆಯೋ ಅಥವಾ ಬೇರೆ ಭಾಷೆಗಳಲ್ಲಿ ಕೂಡ ನಡೆಯುತ್ತಿದೆಯೋ ಎಂಬುದನ್ನು ಅಧ್ಯಯನ ಮಾಡಬೇಕು. ನನ್ನ ತಿಳಿವಳಿಕೆಯ ಪ್ರಕಾರ ಜಪಾನ್, ಜರ್ಮನಿ, ಫ್ರಾನ್ಸ್, ಚೀನಾ, ರಷ್ಯಾ ಹೀಗೆ ಹಲವು ರಾಷ್ಟ್ರಗಳಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣವು ಕೂಡ ಆಯಾ ದೇಶಗಳ ಭಾಷೆಯಲ್ಲಿಯೇ ನಡೆಯುತ್ತದೆ. ಇಂಗ್ಲಿಷರು ಆಳ್ವಿಕೆ ನಡೆಸಿದ ವಸಾಹತುಶಾಹಿ ದೇಶಗಳಲ್ಲಿ ಮಾತ್ರ ಉನ್ನತ ಶಿಕ್ಷಣದ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮ ಇದೆ. ಜಪಾನ್, ಜರ್ಮನಿ, ಫ್ರಾನ್ಸ್, ಚೀನಾ, ರಷ್ಯಾಗಳಲ್ಲಿ ಸಾಧ್ಯ ಆಗಿರುವಾಗ ಶ್ರೀಮಂತ ಇತಿಹಾಸ ಇರುವ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಉರ್ದು ಭಾಷೆಗಳಲ್ಲಿ ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದರು.
ವೈದ್ಯಕೀಯ ಇಂಜಿನಿಯರಿಂಗ್ ಸೇರಿದಂತೆ ಎಲ್ಲ ಉನ್ನತ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಹಾಗೂ ರಾಜ್ಯ ಸರ್ಕಾರದ ಎಲ್ಲ ಉದ್ಯೋಗಗಳಲ್ಲಿ ಎಸ್‌ಎಸ್‌ಎಲ್‌ಸಿ ತನಕ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 25 ಸ್ಥಾನಗಳನ್ನು ಮೀಸಲಿಡಲು, ರಾಜ್ಯದಲ್ಲಿ ಸ್ಥಾಪನೆ ಆಗಲಿರುವ ಉದ್ಯಮಗಳಲ್ಲಿ ಶೇಕಡ 50ರಷ್ಟು ಸ್ಥಾನವನ್ನು ಮೀಸಲಿಡಲು ಕಾನೂನು ಮಾಡಿ, ಅಕ್ಷರಶಃ ಜಾರಿ ಮಾಡಿದರೆ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವುದಿಲ್ಲ ಅನ್ನುತ್ತಾರೆಯೇ? ಕರ್ನಾಟಕದಲ್ಲಿ ಹುಟ್ಟಿ ವೈದ್ಯಕೀಯ ಶಿಕ್ಷಣ ಪಡೆದವರು, ವೈದ್ಯರಾದ ನಂತರ ಎಲ್ಲಿ ಸೇವೆ ಸಲ್ಲಿಸುತ್ತಾರೆ? ಬಹುಸಂಖ್ಯೆಯ ಜನರು ರಾಜ್ಯದಲ್ಲಿಯೇ ನೆಲೆಸುತ್ತಾರೆ. ಅವರು ವ್ಯವಹರಿಸಬೇಕಾಗಿರುವುದು ನಮ್ಮ ಜನರ ನಡುವೆಯೇ. ಸೇವೆಯ ಸಂದರ್ಭದಲ್ಲಿ ಕನ್ನಡ ಬಳಕೆಯೇ ಹೆಚ್ಚಲ್ಲವೇ? ಹೊರದೇಶಗಳಿಗೆ ಹೋಗಿ ನೆಲೆಸಿರುವ ವೈದ್ಯರ ಸಂಖ್ಯೆ ಶೇಕಡಾವಾರು ಲೆಕ್ಕದಲ್ಲಿ ಬಹಳ ಕಡಿಮೆ. ವೈದ್ಯರಿಗೆ ಹೋಲಿಸಿದರೆ ಇಂಜಿನಿಯರ್ ಗಳು ಹೆಚ್ಚಾಗಿ ಹೊರ ದೇಶಗಳಿಗೆ ಹೋಗುತ್ತಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಪಥ ಬಳಗದ ಪಿ. ಪುರುಷೋತ್ತಮ್, ತಿರುಪತಿಹಳ್ಳಿ ಶಿವಶಂಕರಪ್ಪ, ಪರಮಶಿವಯ್ಯ ಇತರರು ಉಪಸ್ಥಿತರಿದ್ದರು.