

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕು ಕಚೇರಿ ಮುಂಭಾಗ ಶನಿವಾರ ವೈದ್ಯರು, ಇಂಡಿಯನ್ ಮೆಡಿಕಲ್ ಅಸೋಸಿಯಷನ್ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿಭಾ ವಿದ್ಯಾ ರಾಠೋಡ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಡಾ.ವಿಜಯ್ ಕುಮಾರ್ ಮಾತನಾಡಿ, ಕೋಲ್ಕತ್ತದಲ್ಲಿ ನಡೆದ ಯುವವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಹೀನ ಕೃತ್ಯವಾಗಿದ್ದು, ಇದನ್ನ ಉಗ್ರವಾಗಿ ಖಂಡಿಸುತ್ತೇವೆ. ದೇಶದಲ್ಲಿ ಸರ್ಕಾರಗಳು ಮಹಿಳಾ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು., ಭವಿಷ್ಯದಲ್ಲಿ ಇಂಥ ಘಟನೆ ತಡೆಗಟ್ಟಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಮಹಿಳೆಯರ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಡಾ.ಮಂಜುನಾಥ ಮಾತನಾಡಿ ಇದೊಂದು ಅಮಾನವೀಯ ಕೃತ್ಯ. ಮಹಿಳಾ ವೈದ್ಯರು ರಾತ್ರಿ ಕೆಲಸ ಮಾಡುವುದು ಕಷ್ಟಕರವಾಗಿದೆ. ಭಯದ ವಾತಾವರಣದಲ್ಲಿ ಮಹಿಳಾ ವೈದ್ಯರು ಸುರಕ್ಷತೆಯ ಬಗ್ಗೆ ಕಾಳಜಿ ಬಗ್ಗೆಯೇ ಹೆಚ್ಚಿನ ಗಮನ ಹರಿಸಿದರೆ ರೋಗಿಗಳ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಕಡಿಮೆಯಾಗುವ ಆತಂಕವಿದೆ. ಹೀಗಾಗಿ ಸರ್ಕಾರ ಮಹಿಳಾ ವೈದ್ಯರಿಗೆ ಸುಸೂತ್ರವಾಗಿ ಕೆಲಸ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್: ಪ್ರತಿಭಟನೆಯ ಅಂಗವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸೆಯನ್ನ ಬಂದ್ ಮಾಡಲಾಗಿತ್ತು. ಬಳಿಕ ರೋಗಿಗಳು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು. ಯಾವುದೇ ಹೆಚ್ಚಿನ ಅನಾಹುತಗಳು ತಾಲೂಕಿನಲ್ಲಿ ವರದಿಯಾಗಿಲ್ಲ.
ಹೆಣ್ಣು ಮಕ್ಕಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು, ಭ್ರೂಣಹತ್ಯೆಯಿಂದ ಪ್ರಾರಂಭವಾಗಿ ಎಲ್ಲ ವಯೋಮಾನದ ಮಹಿಳೆಯರ ಮೇಲೂ ಆಗಾಗ ನಡೆಯುತ್ತಿರುತ್ತವೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸಿದ್ದಾರೆ. ಆದರೆ, ಸರ್ಕಾರಗಳು ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿ ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ ಕಠಿಣ ಕಾನೂನುಗಳನ್ನು ಜಾರಿಗೆ ತಂದು ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಲು ಮುಂದಾಗಬೇಕು.ಡಾ.ರಮೇಶ್, ಸಾರ್ವಜನಿಕ ಆಸ್ಪತ್ರೆ ಮುಖ್ಯಾಡಳಿತಾಧಿಕಾರಿ