ವೈದ್ಯ ವಿದ್ಯಾರ್ಥಿನಿ ಹತ್ಯೆಗೆ ಆಕ್ರೋಶ

CTD DOCTERS STRIKE
Published on

ಚಿತ್ರದುರ್ಗ: ಕೋಲ್ಕಾತ್ತದ ಆರ್‌ಜಿಕರ್ ಟ್ರೈನಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಹತ್ಯೆ ಮಾಡಿರುವ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಚಿತ್ರದುರ್ಗ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ನೇತೃತ್ವದಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಈ ಪ್ರಕರಣವನ್ನು ಖಂಡಿಸಿ ದೇಶ ವ್ಯಾಪಿ ಪ್ರತಿಭಟನೆಗಳಾಗುತ್ತಿದ್ದು, ಸಿಬಿಐ ತನಿಖೆಗೆ ಮುಂದಾಗಿದೆ. ಪಶ್ಚಿಮ ಬಂಗಾಳದ ಆರೋಗ್ಯ ವ್ಯವಸ್ಥೆಯಲ್ಲಿ ನುಸುಳಿರುವ ಕ್ರಿಮಿನಲ್‌ಗಳಿಂದಾಗಿ ಈ ಪ್ರಕರಣದ ನ್ಯಾಯಯುತ ತನಿಖೆ ನಡೆಯುವುದೇ ಎಂಬ ಶಂಕೆ ಎದುರಾಗಿದೆ.
ಅತ್ಯಂತ ಅಮಾನುಷ ಕೃತ್ಯವನ್ನು ಎಸಗಿರುವ ಎಲ್ಲ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಹಾಗೂ ಸಾಕ್ಷಾೃಧಾರಗಳನ್ನು ತಿರಚಲು ಮುಂದಾಗಿರುವಂಥವರನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ದೂರಿದರು.
ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಕೋಲ್ಕಾತ್ತದಲ್ಲಾದ ಈ ಕೃತ್ಯ ದೇಶದ ಇತರ ಮೆಡಿಕಲ್ ಕಾಲೇಜುಗಳಲ್ಲೂ ನಡೆದರೆ ಹೊಣೆ ಯಾರೆಂದು ಆತಂಕ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ತಕ್ಷಣ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷೆ ಡಾ.ವಿ.ಲತಾ, ಕಾರ‌್ಯದರ್ಶಿ ಡಾ.ಲೋಕೇಶ್ವರಿ, ಖಜಾಂಚಿ ಡಾ.ಸೌಮ್ಯಾ, ಡಾ.ಸುಹಾಸಿನಿ, ಡಾ.ಮಲ್ಲಿಕಾರ್ಜುನಪ್ಪ, ಡಾ.ಗೀತಾ, ಡಾ.ರಶ್ಮಿ, ಡಾ.ನಜ್ಮಾ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net