ವೈದ್ಯ ವಿದ್ಯಾರ್ಥಿ ಮೇಲೆ ಅತ್ಯಾಚಾರ- ಹತ್ಯೆ ಖಂಡಿಸಿ ಪ್ರತಿಭಟನೆ

ವೈದ್ಯ ವಿದ್ಯಾರ್ಥಿ ಮೇಲೆ ಅತ್ಯಾಚಾರ- ಹತ್ಯೆ ಖಂಡಿಸಿ ಪ್ರತಿಭಟನೆ
Published on

ಹಾಸನ: ಕೋಲ್ಕತ್ತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿ ಮೇಲೆ ಅತ್ಯಾಚಾರ- ಹತ್ಯೆ ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೋಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಓ) ವತಿಯಿಂದ ಭಾನುವಾರ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ಸಂಚಾಲಕಿ ಚೈತ್ರ ಮಾತನಾಡಿ, ಕೋಲ್ಕತ್ತಾ ವೈದ್ಯಕೀಯ ಕಾಲೇಜಿನೊಳಗೆಯೇ ವೈದ್ಯ ವಿದ್ಯಾರ್ಥಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಈ ಕೃತ್ಯವನ್ನು ಖಂಡಿಸಿ ಈಗಾಗಲೇ ಜನರು ಬೀದಿಗಿಳಿದಿದ್ದಾರೆ. ಆದರೆ, ಪ್ರತಿಭಟನೆಯ ದಿಕ್ಕು ತಪ್ಪಿಸುವ ಹೀನ ಪ್ರಯತ್ನವನ್ನು ಆಡಳಿತಾರೂಢ ಟಿಎಂಸಿ ಸೇರಿ ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿವೆ. ಆದ್ದರಿಂದ ಸರಿಯಾದ ದಾರಿಯಲ್ಲಿ ಮುನ್ನಡೆದು ಸಂಘಟಿತ ಹೋರಾಟ ನಡೆಸುವುದರಿಂದ ಮಾತ್ರ ಪರಿಹಾರ ಸಾಧ್ಯ ಎಂದು ಹೇಳಿದರು.
ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿರುವ ಅಶ್ಲೀಲ ಸಿನಿಮಾ, ಪೋರ್ನ್ ವೆಬ್ ಸೈಟ್‌ಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿ, ಸಾಂಸ್ಕೃತಿಕ ಅಧಃಪತನಕ್ಕೆ ಕಾರಣವಾಗಿವೆ. ಇವುಗಳ ವಿರುದ್ಧ ಸಮರ ಸಾರಿ ನೇತಾಜಿ-ಭಗತ್ ಸಿಂಗ್ ಅವರಂತಹ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು ಹಾಗು ನವೋದಯದ ಹರಿಕಾರರ ಉನ್ನತ ಚಿಂತನೆಗಳನ್ನು ಎಲ್ಲೆಡೆ ಸಾರುವ ಐತಿಹಾಸಿಕ ಜವಾಬ್ದಾರಿಯು ವಿದ್ಯಾರ್ಥಿ ಸಮೂಹದ ಮೇಲಿದೆ. ಆದ್ದರಿಂದ ರಾಜ್ಯದಲ್ಲಿ ಹೊಸ ಸಾಂಸ್ಕೃತಿಕ ಚಳುವಳಿಗೆ ನಾಂದಿ ಹಾಡಬೇಕೆಂದು ಮನವಿ ಮಾಡಿದರು.
ಸಂಘಟನೆಯ ಕಾರ್ಯಕರ್ತರು ಪುರುಷೋತ್ತಮ್, ಧನುಶ್ರೀ, ಮಮತಾ, ಗಾಯತ್ರಿ, ಚೇತನ, ಪ್ರಜ್ವಲ್, ಮದನ್,ಪೂಜಾ, ತರುಣ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net