ವೈದ್ಯ ನಾಪತ್ತೆ ಪ್ರಕರಣಕ್ಕೆ ರಾಜಕೀಯ ಬಣ್ಣ

21-Manjunath-HSK-01
Published on

ಹೊಸಕೋಟೆ : ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ನಾಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗೆ ಧಮ್ಕಿ ಹಾಕಿದ ವ್ಯಕ್ತಿ ಬಿಜೆಪಿ ನಾಯಕರೊಬ್ಬರ ಆಪ್ತ ಎಂಬ ಬಗ್ಗೆ ಪ್ರಚಾರವಾಗಿತ್ತು. ಇದೇ ಪ್ರಕರಣ ಇದೀಗ ಶಾಸಕರ ಕಾಲಿಗೆ ಸುತ್ತಿಕೊಳ್ಳುತ್ತಿದ್ದು, ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ.ಶಾಸಕ ಶರತ್‌ಬಚ್ಚೇಗೌಡ ಬೆಂಬಲಿಗರು ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡು ತೇಜೋವಧೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿ.ಜಯರಾಜ್ ಸೋಮವಾರ ದ್ರೌಪದಮ್ಮ ದೇಗುಲ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಡಿ.15ರಂದು ಡಾ.ಮಂಜುನಾಥ್ ನಿಗೂಢವಾಗಿ ನಾಪತ್ತೆಯಾಗಿ, ಮೂರು ದಿನದ ಬಳಿಕ ಪೊಲೀಸ್ ಬೆಂಗಾವಲಿನಲ್ಲಿ ಮನೆಗೆ ಮರಳಿದ್ದು ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ ಪ್ರಕರಣ ಬೂದಿಮುಚ್ಚಿದ ಕೆಂಡದಂತಿದ್ದು, ಹೊಸಕೋಟೆ ರಾಜಕೀಯದಲ್ಲಿ ದಿನಕ್ಕೊಂದು ಮಗ್ಗಲಿಗೆ ಮರಳುತ್ತಿದೆ. ಜಯರಾಜ್ ಧಮ್ಕಿ ಹಾಕಿ ಜೀವ ಬೆದರಿಕೆ ಹಾಕಿದ್ದರಿಂದ ಬೇಸತ್ತು ಯಾರಿಗೂ ಹೇಳದೆ ಮೈಸೂರು ಕಡೆ ತೆರಳಿದ್ದೆ ಎಂದು ಡಾ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಇದನ್ನು ಅಲ್ಲಗೆಳೆದಿರುವ ಜಯರಾಜ್ ಆಯುರ್ವೇದ ವೈದ್ಯನಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೇ ಹೊರತು ಇದರ ಹಿಂದೆ ಯಾವುದೇ ಷಡ್ಯಂತ್ರವಿಲ್ಲ. ರಾಜಕೀಯ ಪಿತೂರಿಯಿಂದ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಮತದಾರರಿಗೆ ತಪ್ಪು ಸಂದೇಶ:ಮಾಧ್ಯಮಗಳಲ್ಲಿ ನನ್ನನ್ನು ಎಂಎಲ್‌ಸಿ ಎಂಟಿಬಿ ನಾಗರಾಜ್ ಆಪ್ತ ಎಂದು ಸಂಭೋಧಿಸಿ ವರದಿ ಮಾಡಲಾಗಿತ್ತು. ಆದರೆ ನಾನು ಸಂಸದ ಬಿ.ಎನ್.ಬಚ್ಚೇಗೌಡರ ಗರಡಿಯಲ್ಲಿ 10 ವರ್ಷದ ಹಿಂದೆ ರಾಜಕೀಯ ಪ್ರವೇಶಿಸಿದೆ. ಕಾಂಗ್ರೆಸ್ ತೊರೆದು ಎಂಟಿಬಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಅವರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದೇನೆ. ಆದರೆ ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಇದನ್ನು ಪ್ರತಿಪಕ್ಷಗಳು ರಾಜಕೀಯವಾಗಿ ಬಳಸಿಕೊಂಡಿವೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸುಜಾತಾ ಕ್ಲಿನಿಕ್ ಮೇಲೆ ದಾಳಿ ನಡೆಸಿ ಅಲ್ಲಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 15 ವರ್ಷದಿಂದ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ವೈದ್ಯರಿಗೆ ಸಹಾಯ ಮಾಡಿ ವಶಪಡಿಸಿಕೊಂಡಿದ್ದ ಔಷಧ ವಾಪಸ್ ಕೊಡಿಸಲು ಪ್ರಯತ್ನಿಸಿದ್ದೇ ತಪ್ಪಾಗಿದೆ. ಎಂಟಿಬಿ ನಾಗರಾಜ್ ಹಾಗೂ ಜಿಲ್ಲಾಧಿಕಾರಿಗಳೂ ಔಷಧ ವಾಪಸ್ ನೀಡಲು ತಿಳಿಸಿದ್ದರು. ನಂತರ ಆಯುರ್ವೇದ ವೈದ್ಯ ಡಾ.ಮೋಹನ್‌ರಿಂದ ಮುಚ್ಚಳಿಕೆ ಬರೆಸಿಕೊಂಡು ಔಷಧಗಳನ್ನು ವಾಪಸ್ ನೀಡಿದ ಮೇಲೆ ನಾಪತ್ತೆ ನಾಟಕವಾಡಿ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ. ಆಡಿಯೋ ಇಟ್ಟುಕೊಂಡು ವಿರೋಧಿಗಳು ಮತದಾರರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಆರೋಪಿಸಿದರು. ನನ್ನ ಬೆಳವಣಿಗೆ ಸಹಿಸದೆ ತೆಜೋವಧೆ ಮಾಡಲು ಶಾಸಕ ಶರತ್ ಬಚ್ಚೇಗೌಡರ ಬೆಂಬಲಿಗರು ಮುಂದಾಗಿದ್ದಾರೆ ಎಂದರು.

ಬಚ್ಚಮ್ಮ ಅಳಲು:ಪತಿಯನ್ನು ನಕಲಿ ವೈದ್ಯ ಎಂದು ಬಿಂಬಿಸಿರುವ ಡಾ.ಮಂಜುನಾಥ್ ಅವರಿಂದ ನನ್ನ ಪತಿ ತೀವ್ರ ಆಘಾತಕ್ಕೊಳಗಾಗಿದ್ದು, ಜೀವಕ್ಕೆ ಅಪಾಯ ತಂದುಕೊಂಡರೆ ನಮ್ಮ ಗತಿ ಏನು? ಎಂದು ಆಯುಷ್ ವೈದ್ಯ ಡಾ.ಮೋಹನ್ ಪತ್ನಿ ಬಚ್ಚಮ್ಮ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net