

ವಿಜಯಪುರ: ವೈದ್ಯನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ವೈದ್ಯ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರದ ಬಂಜಾರ್ ಕ್ರಾಸ್ ಬಳಿ ನಡೆದಿದೆ. ಡಾ. ರಮೇಶಗೌಡ ಬಿರಾದಾರ ಸಾವನ್ನಪ್ಪಿದ್ದಾರೆ ವಿಜಯಪುರದ ಬಂಜಾರಾ ಕ್ರಾಸ್ ಬಳಿಯ ಮನೆಯಲ್ಲಿ ಘಟನೆ ನಡೆದಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಡ್ ರೂಂ ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದು ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಆದ ಬೆಂಕಿ ಅವಘಡವೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ವ್ಯಕ್ತವಾಗಿದೆ. ವೈದ್ಯನೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಸ್ಥಳಕ್ಕೆ ಆದರ್ಶನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಂಜಾರಾ ಕ್ರಾಸ್ ನಲ್ಲಿ ಧನ್ವಂತರಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ, ಬಿ ಎ ಎಂ ಎಸ್ ಡಿಇಎಂ ಕೋರ್ಸ್ ಮುಗಿಸಿದ್ದರು. ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ಜರುಗಿದೆ.